ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮೂಲ ಸೌಕರ್ಯ ಕೊರತೆ ಆರೋಪ; ಕಿಮ್ಸ್‌ನಲ್ಲಿ ರೋಗಿಗಳ ನರಳಾಟ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಅತಿದೊಡ್ಡ ಸರ್ಕಾರಿ ಆಸ್ಪತ್ರೆ ಎನ್ನಿಸಿಕೊಂಡಿರುವ ಕಿಮ್ಸ್‌ನಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ರೋಗಿಗಳು ಮತ್ತು ಅವರ ಕುಟುಂಬಸ್ಥರು ಪರದಾಡುತ್ತಿರುವ ಅಮಾನವೀಯ ದೃಶ್ಯಗಳು ಬೆಳಕಿಗೆ ಬಂದಿವೆ.

ಆಸ್ಪತ್ರೆಯಲ್ಲಿ ಸ್ಟ್ರೆಚರ್‌ಗಳ ಕೊರತೆಯಿಂದಾಗಿ ಕುಟುಂಬಸ್ಥರೇ ವಯೋವೃದ್ಧ ಹಾಗೂ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಕೈಯಲ್ಲಿ ಎತ್ತಿಕೊಂಡು ವಾರ್ಡ್‌ಗಳಿಗೆ ಸಾಗಿಸುತ್ತಿರುವ ದೃಶ್ಯಗಳು ಕಂಡು ಬಂದಿವೆ. ಕೆಲ ರೋಗಿಗಳನ್ನು ರಸ್ತೆ ಬದಿಯಲ್ಲೇ ಕೂರಿಸಿ ವಾಹನಕ್ಕಾಗಿ ಕಾಯುತ್ತಿರುವ ಘಟನೆಗಳು ಸಹ ಗಮನ ಸೆಳೆದಿವೆ. ಸಿಬ್ಬಂದಿ ಕೊರತೆಯಿಂದ ಸ್ಟ್ರೆಚರ್‌ಗಳನ್ನು ನೂಕುವ ಜವಾಬ್ದಾರಿಯನ್ನೂ ಕುಟುಂಬಸ್ಥರೇ ಹೊತ್ತಿದ್ದಾರೆ ಎಂದು ರೋಗಿಗಳ ಪೋಷಕರು ಆರೋಪಿಸಿದ್ದಾರೆ.

ಸ್ಕ್ಯಾನಿಂಗ್ ಸೌಲಭ್ಯ ಸಮಸ್ಯೆಯಿಂದ ಕೆಲ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಆಂಬ್ಯುಲೆನ್ಸ್ ಕೊರತೆಯಿಂದ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾಗಿದೆ. ಬೆಡ್‌ಗಳ ಕೊರತೆಯಿಂದ ತಕ್ಷಣ ದಾಖಲಾತಿ ಸಾಧ್ಯವಾಗದೆ ಹಲವರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಂಬಂಧಿಕರು ದೂರಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಕಿಮ್ಸ್ ವೈದ್ಯ ಅಧೀಕ್ಷಕರು, ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದಿನಕ್ಕೆ 7 ರಿಂದ 8 ಮಂದಿ ಆಯಾ ಹಾಗೂ ವಾರ್ಡ್‌ಬಾಯ್‌ಗಳು ಕರ್ತವ್ಯದಲ್ಲಿರುತ್ತಾರೆ. ಇಂತಹ ಘಟನೆಗಳು ಮರುಕಳಿಸದಂತೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯದ ಎರಡನೇ ಅತಿದೊಡ್ಡ ನಗರ ಎಂಬ ಹೆಗ್ಗಳಿಕೆ ಹೊಂದಿರುವ ಹುಬ್ಬಳ್ಳಿಯ ಪ್ರಮುಖ ಆಸ್ಪತ್ರೆಯಲ್ಲೇ ಇಂತಹ ಪರಿಸ್ಥಿತಿ ಉಂಟಾಗಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

-ಬ್ಯೂರೋ ರಿಪೋರ್ಟ್, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

01/02/2026 08:04 pm

Cinque Terre

46.81 K

Cinque Terre

1

ಸಂಬಂಧಿತ ಸುದ್ದಿ