ಹುಬ್ಬಳ್ಳಿ: ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಕರೆಯಲ್ಪಡುವ (ಕಿಮ್ಸ್) ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ ಎರಡು ದಿನಗಳಿಂದ ಸರತಿ ಸಾಲಿನಲ್ಲಿ ನಿಂತು ರೋಗಿಗಳು ಹೈರಾಣಾಗುತ್ತಿದ್ದಾರೆ; ಈ ಪರಿಸ್ಥಿತಿ ಇನ್ನೂ ಮುಂದುವರಿದಿದೆ.
ರೋಗಿಗಳ ಪರದಾಟ ಮತ್ತು ಸಮಸ್ಯೆ
ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ಆಗಮಿಸುವ ರೋಗಿಗಳು, ಒಪಿಡಿ ಹಾಗೂ ಅಪಘಾತ ವಿಭಾಗಗಳಲ್ಲಿ ಗಂಟೆಗಟ್ಟಲೆ ಕಾದು ಸುಸ್ತಾಗುತ್ತಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಇದೇ ಪರಿಸ್ಥಿತಿಯಲ್ಲಿ ರೋಗಿಗಳು ಪರದಾಡುತ್ತಿದ್ದಾರೆ. ಆಸ್ಪತ್ರೆಯ ಸಾಫ್ಟ್‌ವೇರ್ ಅಪ್ಡೇಟ್‌ನಿಂದಾಗಿ ರೋಗಿಗಳಿಗೆ ಈ ತೊಂದರೆ ಎದುರಾಗಿದ್ದು, ಮುಂದಿನ ಮೂರರಿಂದ ನಾಲ್ಕು ದಿನಗಳ ಕಾಲವೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ.
ಕಿಮ್ಸ್ ಆಡಳಿತಕ್ಕೆ ಆಗ್ರಹ
ಪ್ರವೇಶ ಚೀಟಿ ಪಡೆಯಲು ರೋಗಿಗಳು ಮತ್ತು ಅವರ ಸಂಬಂಧಿಕರು ಉದ್ದನೆಯ ಸಾಲಿನಲ್ಲಿ ನಿಲ್ಲಬೇಕಾಗಿದೆ. ಆಸ್ಪತ್ರೆಗೆ ದಾಖಲಾಗಬೇಕಿದ್ದ ರೋಗಿಗಳು ಸಹ ಆಸನಗಳಲ್ಲೇ ಕುಳಿತಿರುವುದು ಮನಕಲಕುವ ದೃಶ್ಯವಾಗಿದೆ. ದೂರದ ಊರುಗಳಿಂದ ಬಂದಿರುವ ರೋಗಿಗಳ ಪರಿಸ್ಥಿತಿಯಂತೂ ಹೇಳತೀರದು. ಈ ಬಗ್ಗೆ ಕಿಮ್ಸ್ ಆಸ್ಪತ್ರೆಯ ಆಡಳಿತ ಮಂಡಳಿ ತಕ್ಷಣ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ವರದಿ: ಮಲ್ಲೇಶ್ ಸೂರಣಗಿ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
31/01/2026 05:12 pm
LOADING...