ಧಾರವಾಡ: ಇದು ಧಾರವಾಡದ ಕೃಷಿ ವಿಶ್ವವಿದ್ಯಾಲಯ. ರಾಜ್ಯ ಅಲ್ಲದೇ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಕೃಷಿ ಸಂಶೋಧನೆಗಳಲ್ಲಿ ಸದಾ ಒಂದಿಲ್ಲೊಂದು ಸಾಧನೆ ಮಾಡುತ್ತಿರುವ ಕೃಷಿ ವಿಶ್ವವಿದ್ಯಾಲಯವು ಇದೀಗ ಕರ್ನಾಟಕ ವಿಶ್ವವಿದ್ಯಾಲಯದಂತೆಯೇ ಸುದ್ದಿಯಲ್ಲಿದೆ.
ಉಪನ್ಯಾಸಕರು, ವಿಜ್ಞಾನಿಗಳು ಮತ್ತು ಇತರ ಸಿಬ್ಬಂದಿ ವರ್ಗಾವಣೆ ವಿಚಾರದಲ್ಲಿ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಪಾಟೀಲ ಅವರು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಅಲ್ಲದೇ ಹಣಕಾಸಿನ ವ್ಯವಹಾರ ಮಾಡಿ ನಿಯಮಗಳನ್ನು ಗಾಳಿಗೆ ತೂರಿ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪವನ್ನು ಇದೀಗ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರೇ ಮಾಡಿದ್ದಾರೆ. ಯಾವುದೇ ವರ್ಗಾವಣೆ ಮಾಡಬೇಕಾದರೆ ಅದನ್ನು ಬೋರ್ಡ್ ಮುಂದೆ ಇಡಬೇಕು.
ಜನವರಿ ಹಾಗೂ ಮಾರ್ಚ್ ತಿಂಗಳಲ್ಲಿ ಮಾತ್ರ ವರ್ಗಾವಣೆ ಮಾಡಬೇಕು ಎಂಬ ನಿಯಮವಿದೆ. ಆದರೆ, ಕುಲಪತಿಗಳು ಇದ್ಯಾವುದನ್ನೂ ಮಾಡದೇ ತಮಗಿಷ್ಟ ಬಂದಂತೆ ವರ್ಗಾವಣೆ ಮಾಡಿ ಸಾಕಷ್ಟು ಅವ್ಯವಹಾರ ಮಾಡಿದ್ದಾರೆ. ಇದರಲ್ಲಿ ಸಾಕಷ್ಟು ಗೋಲ್ಮಾಲ್ ಸಹ ನಡೆದಿದೆ ಎಂದು ಸದಸ್ಯರು ಆರೋಪಿಸಿದ್ದಾರೆ.
ಯಾವ್ಯಾವ ವಿಜ್ಞಾನಿ, ಉಪನ್ಯಾಸಕರು ಹಾಗೂ ಇತರ ಸಿಬ್ಬಂದಿಯನ್ನು ಎಲ್ಲಿಗೆ ವರ್ಗಾವಣೆ ಮಾಡಿದ್ದೀರಿ ಎಂಬ ಪಟ್ಟಿ ಕೊಡಿ ಎಂದರೂ ಕುಲಪತಿಗಳು ಕೊಡುತ್ತಿಲ್ಲ.
ವ್ಯವಸ್ಥಾಪನಾ ಮಂಡಳಿ ಸದಸ್ಯರು ಇರುವುದಾದರೂ ಏಕೆ? ಇಲ್ಲಿ ಕುಲಪತಿಗಳೇ ಸರ್ವಾಧಿಕಾರಿಗಳೇ? ಇಲ್ಲಿ ಸಾಕಷ್ಟು ಅವ್ಯವಹಾರ ಆಗಿದ್ದಂತೂ ಸತ್ಯ. ಎಲ್ಲ ದಾಖಲೆಗಳೊಂದಿಗೆ ನಾವು ಲೋಕಾಯುಕ್ತ ಸಂಸ್ಥೆಗೆ ದೂರು ನೀಡುತ್ತೇವೆ ಎಂದಿರುವ ಸದಸ್ಯರು, ರಾಜ್ಯಪಾಲರು, ಸಿಎಂ ಹಾಗೂ ಕೃಷಿ ಸಚಿವರಿಗೂ ಈ ಬಗ್ಗೆ ದೂರು ನೀಡಲು ಮುಂದಾಗಿದ್ದಾರೆ.
ನಿರಂತರ ವರ್ಗಾವಣೆಗಳ ಕಾರಣದಿಂದ, 28 ಸಂಶೋಧನಾ ಕೇಂದ್ರಗಳಲ್ಲಿ 20 ಕೇಂದ್ರಗಳು ಕಳೆದ 3 ವರ್ಷಗಳಿಂದ ಆರ್ಥಿಕ ನಷ್ಟದಲ್ಲಿವೆ.
ಇತ್ತೀಚಿನ 2023-24 ಆರ್ಥಿಕ ವರ್ಷದಲ್ಲಿ ಒಟ್ಟಾರೆ 1.05 ಕೋಟಿ ರೂಪಾಯಿ ನಷ್ಟ ದಾಖಲಾಗಿದೆ. ವರ್ಗಾವಣೆ, ಮರುವರ್ಗಾವಣೆಯ ನಂತರ ಸಂಬಳವನ್ನು ತಪ್ಪಾದ ಖಾತೆ ಶೀರ್ಷಿಕೆಗಳ ಅಡಿಯಲ್ಲಿ ದಾಖಲಿಸಲಾಗುತ್ತಿದ್ದು, ಇದರಿಂದ ಸಿಬ್ಬಂದಿಗೂ ಹಾಗೂ ಖಜಾನೆಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ವ್ಯವಸ್ಥಾಪನಾ ಮಂಡಳಿ ಸದಸ್ಯರು ಆರೋಪಿಸಿದ್ದು, ಇದು ಎಷ್ಟು ಸತ್ಯ ಹಾಗೂ ಎಷ್ಟು ಸುಳ್ಳು ಎಂಬುದು ತನಿಖೆಯಿಂದ ಮಾತ್ರ ಗೊತ್ತಾಗಬೇಕಿದೆ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/02/2026 11:31 am