ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಗರಗ ಕಲ್ಮಠಕ್ಕೆ ನೂತನ ಉತ್ತರಾಧಿಕಾರಿ.. ಮಡಿವಾಳೇಶ್ವರರ ಆಶಯದಂತೆ ಮುನ್ನಡೆಯಲಿದೆ ಮಠ

ಧಾರವಾಡ: ಉತ್ತರ ಕರ್ನಾಟಕದ ಪ್ರಸಿದ್ಧ ಮಠಗಳಲ್ಲಿ ಧಾರವಾಡ ತಾಲೂಕಿನ ಗರಗ ಮಡಿವಾಳೇಶ್ವರ ಕಲ್ಮಠವೂ ಒಂದು. ಈ ಮಠಕ್ಕೆ ಕಳೆದ 2023 ರಲ್ಲಿ ಉತ್ತರಾಧಿಕಾರಿ ನೇಮಿಸುವ ವಿಚಾರ ದೊಡ್ಡ ಚರ್ಚೆಗೆ ಗ್ರಾಸವಾಗಿ ಸುದ್ದಿಯಲ್ಲಿತ್ತು. ಆಗ ಜಂಗಮ ಸಮಾಜದ ಸ್ವಾಮೀಜಿಯನ್ನು ಈ ಮಡಿವಾಳೇಶ್ವರ ಕಲ್ಮಠಕ್ಕೆ ನೇಮಕ ಮಾಡಿತ್ತು.

ಆಗ ಲಿಂಗಾಯತ ಸ್ವಾಮೀಜಿಗಳು ಇದಕ್ಕೆ ವಿರೋಧ ಮಾಡಿದರೂ ಟ್ರಸ್ಟ್ ಮಾತ್ರ ಜಂಗಮ ಸಮಾಜದ ಪ್ರಶಾಂತ ದೇವರನ್ನೇ ಮಠಕ್ಕೆ ನೇಮಕ ಮಾಡಿ ಅವರನ್ನು ಅದ್ಧೂರಿಯಾಗಿಯೇ ಸ್ವಾಗತ ಮಾಡಿಕೊಂಡಿತ್ತು. ಆದರೆ ಈಗ ಪ್ರಶಾಂತ ದೇವರು ಮಠ ತ್ಯಜಿಸಿದ್ದಕ್ಕೆ ನೂತನ ಸ್ವಾಮೀಜಿಯನ್ನು ಇದೀಗ ಮತ್ತೆ ನೇಮಕ ಮಾಡಲಾಗಿದೆ. ವಯಸ್ಸಿನಲ್ಲಿ ಚಿಕ್ಕವರಾಗಿದ್ದ ಪ್ರಶಾಂತ ದೇವರನ್ನು ಒಂದು ವರ್ಷಕ್ಕೆ ಮಾತ್ರ ನೇಮಕ ಮಾಡಲಾಗಿತ್ತು, ಉತ್ತರಾಧಿಕಾರಿ ಎಂದು ನೇಮಕ ಮಾಡಿರಲಿಲ್ಲ ಎನ್ನುವ ಟ್ರಸ್ಟ್, ಹಿಂದಿನ ಸ್ವಾಮೀಜಿಯನ್ನು ನೇಮಕ ಮಾಡುವಾಗ ಲಿಂಗಾಯತ ಪರಂಪರೆಯ ಮಠ ಇರೋದ್ರಿಂದ ಇಲ್ಲಿ ಲಿಂಗಾಯತ ಸ್ವಾಮೀಜಿ ಇರಲಿ ಎಂದು ಹೇಳಿದ್ದರು, ಈ ಮಠದ ಭಕ್ತರು ಮತ್ತು ಟ್ರಸ್ಟ್ ಅಧ್ಯಕ್ಷರಾದ ದೇಸಾಯಿ ಕುಟುಂಬ ಸ್ವಾಮೀಜಿ ನೇಮಕ ಮಾಡುವ ಎಲ್ಲ ಹಕ್ಕು ಹೊಂದಿದೆ ಎಂದು ಬಾಂಬೆ ಆಕ್ಟ್ ಅಡಿ ಇರುವ ಬೈಲಾದಲ್ಲೇ ಇದೆ. ಈಗ ಸದ್ಯ ನೂತನ ಉತ್ತರಾಧಿಕಾರಿಯಾಗಿ ಆತ್ಮಾರಾಮ್ ಸ್ವಾಮೀಜಿ ಅವರನ್ನು ನೇಮಕ ಮಾಡಲಾಗಿದೆ ಎನ್ನುತ್ತಾರೆ ಅಶೋಕ ದೇಸಾಯಿ.

ಹಿಂದೆ ಮಠದ ಉತ್ತರಾಧಿಕಾರಿ ನೇಮಕ ಮಾಡುವಾಗ ನಡೆದಿದ್ದ ಎಲ್ಲ ಗೊಂದಲ ಈಗ ಬಂದಿರುವ ಉತ್ತರಾಧಿಕಾರಿಗೆ ಗೊತ್ತಿಲ್ಲ ಎಂದೇನಿಲ್ಲ. ಜಂಗಮ ಸ್ವಾಮೀಜಿ ಉತ್ತರಾಧಿಕಾರಿ ಆಗಬೇಕೋ ಅಥವಾ ಲಿಂಗಾಯತ ಸ್ವಾಮೀಜಿ ಉತ್ತರಾಧಿಕಾರಿ ಆಗಬೇಕೋ ಎಂಬ ಗೊಂದಲದ ಎಲ್ಲ ಮಾಹಿತಿ ಇವರಿಗೆ ಇದೆ. ಹೀಗಿರುವಾಗ ಮಠದ ಎಲ್ಲ ಭಕ್ತರನ್ನು ಒಮ್ಮತದಿಂದ ಕರೆದುಕೊಂಡು ಹೋಗುವ ಜವಾಬ್ದಾರಿ ಇವರ ಮೇಲೆ ಬಿದ್ದಿದೆ. ಇನ್ನು ಸಿದ್ದೇಶ್ವರ ಸ್ವಾಮೀಜಿಯಿಂದ ದೀಕ್ಷೆ ಪಡೆದಿರುವ ಈ ಆತ್ಮಾರಾಮ್ ಸ್ವಾಮೀಜಿ, ಮಠದಲ್ಲಿ ಏನೇ ನ್ಯೂನ್ಯತೆ ಇದ್ದರೂ ಅದನ್ನು ಬದಿಗಿಟ್ಟು ಜಾತಿ ಆಧಾರದ ಮೇಲೆ ಮಠ ನಡೆಯದಂತೆ ತೆಗೆದುಕೊಂಡು ಹೋಗುತ್ತೇನೆ ಎನ್ನುತ್ತಾರೆ.

ಒಟ್ಟಿನಲ್ಲಿ ಉತ್ತರ ಕರ್ನಾಟಕದ ಪ್ರಸಿದ್ಧ ಮಠ ಎಂದೇ ಹೆಸರು ಪಡೆದಿರುವ ಈ ಮಡಿವಾಳೇಶ್ವರ ಕಲ್ಮಠಕ್ಕೆ ಈಗ ಕಾಯಂ ಉತ್ತರಾಧಿಕಾರಿ ಬಂದಿದ್ದಾರೆ. ಮಡಿವಾಳೇಶ್ವರ ಸ್ವಾಮೀಜಿ ಆಶಯ ಏನಿತ್ತೋ ಅದರಂತೆ ಮಠ ತೆಗೆದುಕೊಂಡು ಹೋಗುವ ಮಾತನ್ನು ಅವರು ಆಡಿದ್ದಾರೆ. ಅದೇ ರೀತಿ ಈ ಮಠ ನಡೆಯಲಿ ಎಂಬುದೇ ಭಕ್ತರ ಆಶಯ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

01/02/2026 05:47 pm

Cinque Terre

33.53 K

Cinque Terre

2

ಸಂಬಂಧಿತ ಸುದ್ದಿ