ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೇಂದ್ರ ಬಜೆಟ್: ಬಲಿಷ್ಠ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ! - ಡಾ. ವಿಎಸ್‌ವಿ ಪ್ರಸಾದ್ ಬಣ್ಣನೆ

ಹುಬ್ಬಳ್ಳಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್ ಹಣದುಬ್ಬರ ನಿಯಂತ್ರಣಕ್ಕೆ ಅಗತ್ಯ ಕ್ರಮಗಳ ಜೊತೆಗೆ ದೇಶದ ಸರ್ವತೋಮುಖ ಅಭಿವೃದ್ಧಿ, ಆರ್ಥಿಕತೆಯನ್ನು ಬಲಿಷ್ಠಗೊಳಿಸುವ ಹಾಗೂ ಜಾಗತಿಕ ಮೂರನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಸಹಕಾರಿಯಾಗುವ ದಿಟ್ಟ ಹೆಜ್ಜೆಗಳನ್ನು ಒಳಗೊಂಡಿದೆ ಎಂದು ಸ್ವರ್ಣಾ ಗ್ರೂಪ್ ಆಫ್ ಕಂಪನೀಸ್‌ನ ಎಂಡಿ ಡಾ. ಸಿಎಚ್ ವಿಎಸ್‌ವಿ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಮುಖ ಕ್ಷೇತ್ರಗಳಿಗೆ ಒತ್ತು

ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಡಾ. ಪ್ರಸಾದ್, ಈ ಬಜೆಟ್ ಜನಪ್ರಿಯ ಉಚಿತ ಕೊಡುಗೆಗಳನ್ನು ನೀಡುವ ಬದಲು, ಶಿಕ್ಷಣ, ಆರೋಗ್ಯ, ಕೃಷಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (MSME), ಸೆಮಿಕಂಡಕ್ಟರ್, ಪ್ರವಾಸೋದ್ಯಮ ಮತ್ತು ಕ್ರೀಡೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಧನಾತ್ಮಕ ಬೆಳವಣಿಗೆಗೆ ಹೆಚ್ಚಿನ ಗಮನ ಹರಿಸಿದೆ. ಇದು ಭವಿಷ್ಯದಲ್ಲಿ ಆರ್ಥಿಕತೆಗೆ ದೊಡ್ಡ ಉತ್ತೇಜನ ನೀಡಲಿದೆ ಎಂಬುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.

ಉದ್ಯೋಗ ಸೃಷ್ಟಿಗೆ MSME ಹಾಗೂ ತಂತ್ರಜ್ಞಾನ

ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ MSME ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಿರುವುದು ಆಶಾದಾಯಕ ಬೆಳವಣಿಗೆ. ಇದರಿಂದ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಿ, ಆತ್ಮನಿರ್ಭರ ಭಾರತದ ಕನಸು ನನಸಾಗಲು ಸಹಕಾರಿಯಾಗಲಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಮತ್ತು ಸೆಮಿಕಂಡಕ್ಟರ್ ತಯಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಹಣಕಾಸು ಮೀಸಲಿಡಲಾಗಿದೆ. ಇದರ ಲಾಭ ಖಂಡಿತವಾಗಿಯೂ ನಮ್ಮ ರಾಜ್ಯ ಕರ್ನಾಟಕಕ್ಕೆ ದೊರೆಯುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.

ಕೃಷಿ ವಲಯಕ್ಕೆ ಉತ್ತೇಜನ

ಕೃಷಿ ವಲಯದಲ್ಲಿ ತೆಂಗು, ಶ್ರೀಗಂಧ, ಗೋಡಂಬಿ ಮತ್ತು ಕೋಕೋದಂತಹ ಬೆಳೆಗಳಿಗೆ ಉತ್ತೇಜನ ನೀಡಲು ನಿರ್ಧರಿಸಲಾಗಿದೆ. ಇವೆಲ್ಲವೂ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಾಗಿದ್ದು, ಇವುಗಳ ಉತ್ಪಾದನೆ ಹಾಗೂ ಸಂಸ್ಕರಣಾ ಕ್ಷೇತ್ರ ಮತ್ತಷ್ಟು ವೃದ್ಧಿಯಾಗಿ ರಾಜ್ಯದ ರೈತರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಡಾ. ಪ್ರಸಾದ್ ತಿಳಿಸಿದ್ದಾರೆ.

ಆರೋಗ್ಯ ಕ್ಷೇತ್ರ ಹಾಗೂ ಹುಬ್ಬಳ್ಳಿ-ಧಾರವಾಡದ ಭವಿಷ್ಯ

ಕೇಂದ್ರ ಸರ್ಕಾರ ಆರೋಗ್ಯ ಕ್ಷೇತ್ರಕ್ಕೂ ಹೆಚ್ಚಿನ ಗಮನ ನೀಡಿದೆ. ಮೂರು ಹೊಸ ಏಮ್ಸ್ (AIIMS) ಕಾಲೇಜುಗಳು, ಮೂರು ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳ ಸ್ಥಾಪನೆ ಮತ್ತು ದೇಶದ ಕೆಲವೆಡೆ ಮೆಡಿಕಲ್ ಹಬ್‌ಗಳನ್ನು ನಿರ್ಮಿಸುವ ಮೂಲಕ ಮೆಡಿಕಲ್ ಟೂರಿಸಂ ಅಭಿವೃದ್ಧಿಪಡಿಸುವ ಇಚ್ಛೆ ವ್ಯಕ್ತಪಡಿಸಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮೂರು ವೈದ್ಯಕೀಯ ಕಾಲೇಜುಗಳು ಮತ್ತು ಹತ್ತಾರು ದೊಡ್ಡ ಆಸ್ಪತ್ರೆಗಳನ್ನು ಹೊಂದಿರುವ ಹುಬ್ಬಳ್ಳಿ-ಧಾರವಾಡ ಕೂಡಾ ಭವಿಷ್ಯದಲ್ಲಿ ಪ್ರಮುಖ ಮೆಡಿಕಲ್ ಹಬ್ ಆಗಿ ಅಭಿವೃದ್ಧಿ ಹೊಂದಲು ಉತ್ತಮ ಅವಕಾಶವಿದೆ ಎಂದು ಡಾ. ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

Edited By : Vijay Kumar
Kshetra Samachara

Kshetra Samachara

01/02/2026 06:44 pm

Cinque Terre

8.49 K

Cinque Terre

0

ಸಂಬಂಧಿತ ಸುದ್ದಿ