ಧಾರವಾಡ: ಧಾರವಾಡ ಜಿಲ್ಲೆಯ 135 ಗ್ರಾಮ ಪಂಚಾಯಿತಿಗಳ ಸದಸ್ಯರ ಅವಧಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಮತ್ತು ನವಲಗುಂದ ತಾಲೂಕಿನ ಬೆಳವಟಿಗೆ ಗ್ರಾಮ ಪಂಚಾಯಿತಿ (ಏ.20, 2026) ಹಾಗೂ ಹುಬ್ಬಳ್ಳಿ ತಾಲೂಕಿನ ಮಲ್ಲಿಗವಾಡ ಗ್ರಾಮ ಪಂಚಾಯಿತಿ (ಆ.23, 2026) ಗಳಲ್ಲಿನ ಸದಸ್ಯರ ಅವಧಿಯು ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಎಲ್ಲ 137 ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಈ ಕುರಿತು ಹೊರಡಿಸಿರುವ ಅಧಿಸೂಚನೆಯಲ್ಲಿ ಧಾರವಾಡ ತಾಲೂಕಿನ 35, ಅಳ್ನಾವರ ತಾಲೂಕಿನ 4, ನವಲಗುಂದ ತಾಲೂಕಿನ 14, ಅಣ್ಣಿಗೇರಿ ತಾಲೂಕಿನ 8, ಹುಬ್ಬಳ್ಳಿ ತಾಲೂಕಿನ 26, ಕುಂದಗೋಳ ತಾಲೂಕಿನ 23 ಮತ್ತು ಕಲಘಟಗಿ ತಾಲೂಕಿನ 27 ಗ್ರಾಮ ಪಂಚಾಯಿತಿಗಳಿಗೆ ಧಾರವಾಡ ಜಿಲ್ಲೆಯ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ನೇಮಕಗೊಂಡಿರುವ ಗ್ರಾಮ ಪಂಚಾಯಿತಿಗಳ ಸದಸ್ಯರ ಅವಧಿಯು ಮುಕ್ತಾಯವಾದ ದಿನದಂದು ಆ ಗ್ರಾಮ ಪಂಚಾಯಿತಿಯ ಆಡಳಿತಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲು ಅವರು ಆದೇಶಿಸಿದ್ದಾರೆ.
ಆಡಳಿತಾಧಿಕಾರಿಗಳು ತಮಗೆ ವಹಿಸಿಕೊಟ್ಟ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಅವಧಿ ಮುಕ್ತಾಯವಾಗುವ ದಿನಾಂಕದಂದು ಆಡಳಿತಾಧಿಕಾರಿಯ ಹುದ್ದೆಯ ಪ್ರಭಾರವನ್ನು ವಹಿಸಿಕೊಳ್ಳಬೇಕು ಹಾಗೂ ಈ ಅಧಿಕಾರಿಗಳು ಕರ್ನಾಟಕ ಪಂಚಾಯತ್ ರಾಜ್ 1993 ರ ಅಧಿನಿಯಮದಂತೆ ಗ್ರಾಮ ಪಂಚಾಯಿತಿಯ ಎಲ್ಲಾ ಅಧಿಕಾರಗಳನ್ನು ಚಲಾಯಿಸಬೇಕು ಮತ್ತು ಕರ್ತವ್ಯಗಳನ್ನು ನೆರವೇರಿಸಬೇಕು ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ 2020-2025ನೇ ಸಾಲಿಗೆ ರಚಿತವಾಗಿದ್ದ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಅವಧಿಯು 2026ನೇ ಜನವರಿ, ಫೆಬ್ರವರಿ, ಏಪ್ರಿಲ್ ಹಾಗೂ ಆಗಸ್ಟ್ ತಿಂಗಳುಗಳ ವಿವಿಧ ದಿನಾಂಕಗಳಂದು ಮುಕ್ತಾಯಗೊಳ್ಳುವುದರಿಂದ, ಅಂತಹ ಗ್ರಾಮ ಪಂಚಾಯಿತಿಗಳಿಗೆ 2026-31ರ ಅವಧಿಗಾಗಿ ಚುನಾವಣೆ ನಡೆದು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯುವ ದಿನಾಂಕದವರೆಗೆ ಆಡಳಿತಾಧಿಕಾರಿಗಳನ್ನು ನೇಮಿಸಲು ಸರ್ಕಾರವು ಆದೇಶಿಸಿದೆ. ಧಾರವಾಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅವಧಿ ಮುಕ್ತಾಯಗೊಳ್ಳುವ ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಕುರಿತು ಸಲ್ಲಿಸಿದ್ದ ಪ್ರಸ್ತಾವನೆಗೆ ಅನುಗುಣವಾಗಿ ಆಡಳಿತಾಧಿಕಾರಿಗಳನ್ನು ನೇಮಿಸಿ, ಅಧಿಸೂಚನೆ ಹೊರಡಿಸಲಾಗಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಅವರು ತಿಳಿಸಿದ್ದಾರೆ.
Kshetra Samachara
02/02/2026 08:40 pm