ಹುಬ್ಬಳ್ಳಿ : ಪೊಲೀಸ್ ಠಾಣೆಗಳೆಂದರೆ ಸಾರ್ವಜನಿಕರಲ್ಲಿ ಸಾಮಾನ್ಯವಾಗಿ ಒಂದು ನಿರ್ದಿಷ್ಟ ಭಾವನೆ ಇರುತ್ತದೆ. ಆದರೆ, ಗ್ರಾಮೀಣ ಪೊಲೀಸ್ ಠಾಣೆಗೆ ಭೇಟಿ ನೀಡಿದರೆ, ಯಾವುದೋ ರಮಣೀಯ ಪರಿಸರದಲ್ಲಿರುವ ಅನುಭವವಾಗುತ್ತದೆ. ಠಾಣೆಯ ಹೊರಗೆ ಮಾತ್ರವಲ್ಲದೆ, ಒಳಗೆ ಕೂಡ ಗಿಡಮರಗಳು ಮತ್ತು ಸಸಿಗಳಿಂದ ಕಂಗೊಳಿಸುತ್ತಿದ್ದು, ಇದು ನಿಜಕ್ಕೂ ಪರಿಸರ ಸ್ನೇಹಿ ಪೊಲೀಸ್ ಠಾಣೆಯಾಗಿ ಗುರುತಿಸಿಕೊಂಡಿದೆ. ಇಲ್ಲಿನ ಸಿಬ್ಬಂದಿ ತಮ್ಮ ಕಾರ್ಯಕ್ಷೇತ್ರವನ್ನು ಅಚ್ಚುಕಟ್ಟಾಗಿ, ಹಸಿರುಮಯವಾಗಿ ರೂಪಿಸಿದ್ದಾರೆ.
ಇನ್ಸ್‌ಪೆಕ್ಟರ್‌ರ ಪರಿಸರ ಸ್ನೇಹಿ ಕಲ್ಪನೆ
ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ಮಿಲಿಟರಿ ಕ್ಯಾಂಟೀನ್ ಪಕ್ಕದಲ್ಲೇ ನಿರ್ಮಿಸಲಾಗಿರುವ ಈ ಗ್ರಾಮೀಣ ಪೊಲೀಸ್ ಠಾಣೆಯನ್ನು, ಇನ್ಸ್‌ಪೆಕ್ಟರ್ ಮುರಗೇಶ ಚೆನ್ನಣ್ಣವರ ಅವರ ಕಲ್ಪನೆಯಂತೆ ಗ್ರಾಮೀಣ ಸೊಬಗಿನ ವಾತಾವರಣದಲ್ಲಿ ರೂಪಿಸಲಾಗಿದೆ. ಠಾಣೆಯ ಮುಂಭಾಗದಲ್ಲಿ ನೆಟ್ಟ ಸಸಿಗಳು ಈಗ ದೊಡ್ಡ ಗಿಡಗಳಾಗಿ ಬೆಳೆದು ನೆರಳು ನೀಡುತ್ತಿವೆ. ಈ ಹಸಿರು ಪರಿಸರದಿಂದ ಶುದ್ಧ ಗಾಳಿ ಲಭ್ಯವಾಗುತ್ತಿದ್ದು, ಮನಸ್ಸಿಗೆ ಆಹ್ಲಾದಕರ ಅನುಭವ ನೀಡುತ್ತಿದೆ.
ಠಾಣಾ ಆವರಣದಲ್ಲಿ ಚಿಕ್ಕದಾದ ದೇವಸ್ಥಾನವನ್ನೂ ನಿರ್ಮಿಸಲಾಗಿದ್ದು, ಎಲ್ಲೆಡೆ ಹಚ್ಚ ಹಸಿರು, ಗಿಡಮರಗಳು ಕಣ್ಮನ ಸೆಳೆಯುತ್ತವೆ. ಸಿಬ್ಬಂದಿಯ ಮನರಂಜನೆಗಾಗಿ ವಾಲಿಬಾಲ್ ಅಂಕಣವನ್ನೂ ಅಚ್ಚುಕಟ್ಟಾಗಿ ಸಿದ್ಧಪಡಿಸಲಾಗಿದೆ. ಅಷ್ಟೇ ಅಲ್ಲದೆ, ಠಾಣೆಯ ಒಳಗೂ ಸಸಿಗಳನ್ನು ಹೊಂದಿರುವ ಕುಂಡಗಳನ್ನು ಇರಿಸಲಾಗಿದ್ದು, ಇದು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಿದೆ. ಇನ್ಸ್‌ಪೆಕ್ಟರ್ ಮುರಗೇಶ ಚೆನ್ನಣ್ಣವರ ಅವರ ಈ ವಿಶಿಷ್ಟ ಕಾರ್ಯಶೈಲಿಯಿಂದಾಗಿ ಗ್ರಾಮೀಣ ಪೊಲೀಸ್ ಠಾಣೆ ಹಸಿರುಮಯವಾಗಿ ಕಂಗೊಳಿಸುತ್ತಿದೆ. ರಾಜ್ಯದ ಹಲವು ಪೊಲೀಸ್ ಠಾಣೆಗಳಿಗೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಇದೀಗ ಮಾದರಿಯಾಗಿ ನಿಂತಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/02/2026 06:10 pm
LOADING...