ಸಿದ್ದಾಪುರ : ತಾಲೂಕಿನ ಗೋಳಿಮಕ್ಕಿ ಬಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೇರ್ಲಮನೆಯಲ್ಲಿ ಶಾಲಾ ವತಿಯಿಂದ ಮತ್ತು ಸಿಂಗಾರ ಇಕೋ ಕ್ಲಬ್ ಅಡಿಯಲ್ಲಿ ಆಯೋಜನೆಗೊಂಡ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ವಿದ್ಯಾರ್ಥಿಗಳಿಂದ ಪಕ್ಷಿ ವಿಶೇಷ ಹಾಗೂ ಪರಿಸರದಲ್ಲಿ ಆಯುರ್ವೇದ ಪ್ರಾತ್ಯಕ್ಷಿಕೆಗಳು. 28 ವಿದ್ಯಾರ್ಥಿಗಳು 28 ಪಕ್ಷಿಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಅವುಗಳ ಗೂಡು. ಮೊಟ್ಟೆಗಳ ಮಾದರಿ, ಅವು ಮೊಟ್ಟೆ ಇಡುವ ಸ್ಥಳಗಳ ಸನ್ನಿವೇಶ ನಿರ್ಮಾಣ, ಅವುಗಳ ಕೂಗು ಹೀಗೆ ಹಲವು ಮಾಹಿತಿಗಳನ್ನ ನೀಡಿದರು.. 27 ವಿದ್ಯಾರ್ಥಿಗಳು 27 ಔಷಧೀಯ ಸಸ್ಯಗಳ ಪ್ರಾತ್ಯಕ್ಷಿಕೆ ನೀಡಿದರು. ತಾವೇ ಮನೆಯಲ್ಲಿ ಬೆಳೆಸಿ ತಂದ ಗಿಡಗಳ ಜೊತೆಗೆ ವಿವಿಧ ಲೇಹ, ಚೂರ್ಣ, ಕಷಾಯಗಳೊಂದಿಗೆ ಪ್ರಾತ್ಯಕ್ಷಿಕೆ ನೀಡಿದರು. ಎಲ್ಲಾ ವಿದ್ಯಾರ್ಥಿಗಳ ಪಾಲಕರೂ ಪ್ರಾತ್ಯಕ್ಷಿಕೆಯಲ್ಲಿ ಜೊತೆ ಸೇರಿ ಇನ್ನಷ್ಟು ಮೌಲ್ಯ ತಂದಿದ್ದು ಶ್ಲಾಘನೀಯ. ಪಾಲಕರ ರಸಪ್ರಶ್ನೆ ಆಯ್ಕೆ ಪರೀಕ್ಷೆಯಲ್ಲಿ 40 ರಲ್ಲಿ 35 ಪಾಲಕರು ಪರೀಕ್ಷೆ ಬರೆದದ್ದು, ತಂದೆ ತಾಯಿ ಇಬ್ಬರೂ ಜೊತೆಗೂಡಿ ಪರೀಕ್ಷೆ ಬರೆದಿರುವುದು ಅವಿಸ್ಮರಣೀಯ.
ಅದರಲ್ಲಿ ಆಯ್ಕೆಯಾದ 8 ತಂಡಗಳ ಮೌಖಿಕ ಸುತ್ತು ಕೋಟ್ಯಧಿಪತಿ ಮಾದರಿಯಲ್ಲಿ ನಡೆದದ್ದು ವಿಶೇಷ. ಸಸ್ಯಗಳು ಮತ್ತು ಪಕ್ಷಿಗಳ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡ ಮೂವರು ಸಂಪನ್ಮೂಲ ವ್ಯಕ್ತಿಗಳಾದ ಉಮಾಪತಿ ಭಟ್, ಮಹಾಬಲೇಶ್ವರ ಭಟ್ , ಸಿ ಆರ್ ಪಿ ನಾಗರಾಜ ನಾಯ್ಕ ಇವರು ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು.
ಸಿ ಆರ್ ಸಿ ಯ ಹೆಮ್ಮೆಯ ಶಿಕ್ಷಕರಾದ ವಿ ಟಿ ಹೆಗಡೆ, ಎಮ್ ಎಸ್ ಹೆಗಡೆ ಇವರು ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಅತ್ಯಂತ ಸುಂದರವಾದ ವಿಜ್ಞಾನ ರಂಗೋಲಿ ಹಾಗೂ ಪೇಪರ್ ಕೊಲ್ಹಾಜ್ ಗಳು ಎಲ್ಲರ ಮನ ಸೆಳೆದವು. ಎಲ್ಲಾ ವಿಭಾಗಗಳಲ್ಲಿ ವಿಜೇತರಾದ ಪಾಲಕರು ಹಾಗೂ ವಿದ್ಯಾರ್ಥಿಗಳಿಗೆ ಪರಿತೋಷಕ,ಬಹುಮಾನ, ಅಭಿನಂದನಾ ಪತ್ರಗಳನ್ನು ನೀಡಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಎಸ್ ಡಿ ಎಮ್ ಸಿ ಅಧ್ಯಕ್ಷರು,ಪದಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಈ ವಿಶೇಷ ಕಾರ್ಯಕ್ರಮದ ಪ್ರಯೋಜನ ದೊರಕುವಂತೆ ಮಾಡಿರುವುದು ಹೆಮ್ಮೆಯ ಸಂಗತಿ . ಇಲಾಖೆಯ ಅಧಿಕಾರಿಗಳುಬೆನ್ನೆಲುಬಾಗಿ ನಿಂತು ಕಾರ್ಯಕ್ರಮಕ್ಕೆ ಶುಭ ಹಾರೈಸಿ, ಅದರ ಯಶಸ್ಸಿಗೆ ಕಾರಣರಾದರು. ಕಾರ್ಯಕ್ರಮದ ತಯಾರಿ ಹಾಗೂ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸಲಾಯಿತು.
Kshetra Samachara
09/03/2026 09:12 pm