ಸಿದ್ದಾಪುರ : ತಾಳಗುಪ್ಪಾ-ಹುಬ್ಬಳ್ಳಿ ರೈಲ್ವೆ ಯೋಜನೆ ಅನುಷ್ಠಾನಕ್ಕೆ ಬಾರದಿರುವುದಕ್ಕೆ ಉತ್ತರ ಕನ್ನಡ ಸಂಸದರ ನಿರ್ಲಕ್ಷ್ಯವೇ ಕಾರಣ ಎಂದು ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶನಿವಾರ ಸಿದ್ದಾಪುರ ತಾಲೂಕಿನ ವಿವಿಧ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 2.35 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಶಿವಮೊಗ್ಗ ಸಂಸದರು ತೋರಿದ ಕಾಳಜಿಯನ್ನು ಉತ್ತರ ಕನ್ನಡದ ಸಂಸದರು ತೋರಿದ್ದರೆ ಇಷ್ಟೊತ್ತಿಗಾಗಲೇ ತಾಳಗುಪ್ಪಾ-ಹುಬ್ಬಳ್ಳಿ ರೈಲ್ವೆ ಯೋಜನೆ ಅನುಷ್ಠಾನಕ್ಕೆ ಬರುತ್ತಿತ್ತು ಎಂದು ಖಾರವಾಗಿ ನುಡಿದರು.
ಸಂಸದರ ವಿರುದ್ಧ ಆಕ್ರೋಶ
ಮೂರು ಅವಧಿಯಲ್ಲಿ ಈ ಕ್ಷೇತ್ರದ ಶಾಸಕರಾಗಿದ್ದವರು ಜನರ ಪರವಾದ ಕಾಳಜಿ ತೋರದಿರುವುದೇ ಸಾರ್ವಜನಿಕರು ಕನಿಷ್ಠ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಲು ಕಾರಣವಾಗಿದೆ ಎಂದು ಭೀಮಣ್ಣ ನಾಯ್ಕ ದೂರಿದರು. ಕ್ಷೇತ್ರದಲ್ಲಿ ಸಮಸ್ಯೆಗಳು ಸಾಕಷ್ಟಿವೆ. ಜನ ವಿಶ್ವಾಸವಿಟ್ಟು ಅವಕಾಶ ಕೊಟ್ಟಾಗ ಜನಪ್ರತಿನಿಧಿಗಳಾದವರು ಶಕ್ತಿಮೀರಿ ಕೆಲಸ ಮಾಡಬೇಕು. ಜನರ ಕಷ್ಟಕಾರ್ಪಣ್ಯದಲ್ಲಿ ಕಿಂಚಿತ್ತಾದರೂ ಭಾಗಿಯಾಗಬೇಕು. ನಮ್ಮ ಸಂಸದರು ಸಂಸತ್ತಿನಲ್ಲಿ ಕ್ಷೇತ್ರದ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವುದನ್ನು ಬಿಟ್ಟು ಮೌನವಾಗಿರುವುದು ಜನರ ಮೇಲಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದರು.
ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಇದೇ ವೇಳೆ ಶಾಸಕ ಭೀಮಣ್ಣ ನಾಯ್ಕ ಅವರು ಸಿದ್ದಾಪುರ ತಾಲೂಕಿನ ಗ್ರಾಮೀಣ ಭಾಗದ ವ್ಯಾಪ್ತಿಯಲ್ಲಿ ಒಟ್ಟು 2.35 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ಜೊತೆಗೆ, ಬೇಡ್ತಿ-ಅಘನಾಷಿನಿ ಯೋಜನೆ ಕುರಿತು ಕೆಲವರು ಜನರಲ್ಲಿ ಆತಂಕ ಮೂಡಿಸುತ್ತಿದ್ದಾರೆ. ಕ್ಷೇತ್ರದ ಜನತೆ ಇದ್ಯಾವುದಕ್ಕೂ ಕಿವಿಗೊಡದೆ ನಿಶ್ಚಿಂತೆಯಿಂದ ನಿಮ್ಮ ನಿಮ್ಮ ಕೆಲಸ ಮಾಡಿಕೊಳ್ಳಿ ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.
PublicNext
21/03/2026 07:06 pm