ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ: ಶರಾವತಿ ಭೂಗತ ಜಲ ವಿದ್ಯುತ್ ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಸ್ವರ್ಣವಲ್ಲೀ ಶ್ರೀ

ಶಿರಸಿ: ಶರಾವತಿ ನದಿಯ ಮಡಿಲಲ್ಲಿ ಅರಣ್ಯ ನಾಶಕ್ಕೆ ಕಾರಣವಾಗುವ ಹಾಗೂ ಪರಿಸರಕ್ಕೆ ಅಪಾಯ ತಂದೊಡ್ಡುವ ‘ಶರಾವತಿ ಭೂಗತ ಜಲ ವಿದ್ಯುತ್ ಯೋಜನೆಯನ್ನು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ತೀವ್ರವಾಗಿ ವಿರೋಧಿಸಿದ್ದಾರೆ.

ಹೊನ್ನಾವರದಲ್ಲಿ ನಡೆದ ಬೃಹತ್ ಜನ ಸಮಾವೇಶಕ್ಕೆ ಶ್ರೀಗಳು ತಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದಲ್ಲದೇ ಈ ಯೋಜನೆ ಪರಿಸರಕ್ಕೆ ಮಾರಕ ಎಂದು ಪ್ರತಿಪಾದಿಸಿದ್ದಾರೆ.

ಈ ಕುರಿತು ‘ಶರಾವತಿ ಉಳಿಸಿ ಹೋರಾಟ ಸಮಿತಿ’ಗೆ ಪತ್ರದ ಮೂಲಕವು ಬೆಂಬಲ ನೀಡಿರುವ ಶ್ರೀಗಳು, ಭೂಕುಸಿತ ಸಂಭವಿಸುವ ಸೂಕ್ಷ್ಮ ವಲಯದಲ್ಲಿ ಇಂತಹ ಬೃಹತ್ ಯೋಜನೆಗಳನ್ನು ಕೈಗೊಳ್ಳುವುದು ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ.

ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಸಂಭವಿಸಿದ ಭೂಕುಸಿತದ ಘಟನೆಗಳನ್ನು ಉಲ್ಲೇಖಿಸಿರುವ ಅವರು, ಈ ಯೋಜನೆಯ ವಿರುದ್ಧ ತಾವು 2020ರಲ್ಲೇ ಅಂದಿನ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ವಿರೋಧ ವ್ಯಕ್ತಪಡಿಸಿರುವುದನ್ನು ನೆನಪಿಸಿದ್ದಾರೆ.

ಇದೇ ವೇಳೆ ಬೇಡ್ತಿ ಮತ್ತು ಅಘನಾಶಿನಿ ನದಿ ತಿರುವು ಯೋಜನೆಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿರುವ ಶ್ರೀಗಳು, ಇವುಗಳಿಂದ ಪರಿಸರ, ಕೃಷಿ ಮತ್ತು ಮೀನುಗಾರಿಕೆ ಮೇಲೆ ತೀವ್ರ ದುಷ್ಪರಿಣಾಮ ಉಂಟಾಗಲಿದೆ ಎಂಬ ವಿಜ್ಞಾನಿಗಳ ಅಭಿಪ್ರಾಯವನ್ನು ಎತ್ತಿ ತೋರಿಸಿದ್ದಾರೆ.

ನದಿಗಳ ಸಂರಕ್ಷಣೆಗಾಗಿ ನಡೆಯುತ್ತಿರುವ ಇಂತಹ ಹೋರಾಟಗಳಿಗೆ ಸಾರ್ವಜನಿಕರು ಒಗ್ಗಟ್ಟಾಗಿ ಕೈಜೋಡಿಸಬೇಕು ಎಂದು ಕರೆ ನೀಡಿದ್ದಾರೆ. ಅನಿವಾರ್ಯ ಕಾರಣಗಳಿಂದ ಹೊನ್ನಾವರದ ಸಮಾವೇಶದಲ್ಲಿ ನೇರವಾಗಿ ಭಾಗವಹಿಸಲು ಸಾಧ್ಯವಾಗದಿದ್ದರೂ, ಹೋರಾಟಕ್ಕೆ ಮಠದ ಪೂರ್ಣ ಸಹಮತವಿದೆ ಎಂದು ಶ್ರೀಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

10/03/2026 08:16 pm

Cinque Terre

3.1 K

Cinque Terre

0

ಸಂಬಂಧಿತ ಸುದ್ದಿ