ಭಟ್ಕಳ: ಹಿಂದು ಸಮ್ಮೇಳನ ಸಮಿತಿ ಯಲ್ವಡಿಕವೂರು ವತಿಯಿಂದ ಹಿಂದು ಸಮ್ಮೇಳನವು ಇಲ್ಲಿನ ಯಲ್ವಡಿಕವೂರು ಹೆದ್ದಾರಿಯ ಜಟ್ಟಿಗೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಹಿಂದು ವಕ್ತಾರ ದಿಕ್ಸೂಚಿ ಭಾಷಣಕಾರ ಶ್ರೀಕಾಂತ ಶೆಟ್ಟಿ ಕಾರ್ಕಳ ಮಾತನಾಡಿ, ಭಾರತದ ಇತಿಹಾಸದಲ್ಲಿ 54 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಗೇರುಸೊಪ್ಪದ ರಾಣಿ ಚೆನ್ನಭೈರಾದೇವಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು. ದೇಶದ ಕಡಲ ತೀರವನ್ನು 24 ಬಾರಿ ರಕ್ಷಿಸಿದ ರಾಣಿ ಚೆನ್ನಭೈರಾದೇವಿಯ ಸೋಲಿಗೆ ನಮ್ಮದೇ ಜನರು ಕಾರಣರಾದರು ಎಂದು ವಿಷಾದ ವ್ಯಕ್ತಪಡಿಸಿದರು.
ಇಂದಿನ ಜಗತ್ತಿನಲ್ಲಿ ಭಾರತ ಮಹತ್ವದ ಸ್ಥಾನವನ್ನು ಪಡೆದುಕೊಂಡಿದ್ದು, ಅದ್ಭುತ ರಾಜತಾಂತ್ರಿಕತೆಯ ಮೂಲಕ ದೇಶ ಬಲಿಷ್ಠವಾಗಿ ಬೆಳೆಯುತ್ತಿದೆ. ಹೊರಗಿನ ಶತ್ರುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಭಾರತ ಆಪರೇಷನ್ ಸಿಂಧುರ ಮೂಲಕ ತೋರಿಸಿದೆ. ಮದ್ದು ಗುಂಡುಗಳ ತಯಾರಿಕೆಯಲ್ಲಿ ಭಾರತ ಉನ್ನತ ಹಂತ ತಲುಪಿದೆ ಎಂದು ಹೇಳಿದರು.
ಇತಿಹಾಸವನ್ನು ಅರಿಯದವರು ವರ್ತಮಾನದಲ್ಲಿ ಬದುಕಲು ಸಾಧ್ಯವಿಲ್ಲ ಮತ್ತು ಭವಿಷ್ಯದಲ್ಲಿ ಮುನ್ನಡೆಯುವುದು ಕಷ್ಟವಾಗುತ್ತದೆ. ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಭಾರತ ಒಂದು ಸಂಸ್ಕೃತಿಯ ದೇಶವಾಗಿ ಬೆಳೆದಿದೆ. ಧರ್ಮಕ್ಕಾಗಿ ಬಲಿಯಾದವರ ಪಿತ್ರು ಋಣವನ್ನು ನಾವು ಮರೆಯಬಾರದು ಎಂದರು.
ಇತಿಹಾಸವನ್ನು ನೆನಪಿಸಿಕೊಂಡು ಧರ್ಮವನ್ನು ಪುನಃ ಬಲಪಡಿಸುವ ಉದ್ದೇಶದಿಂದ ಇಂತಹ ಹಿಂದು ಸಮ್ಮೇಳನಗಳನ್ನು ಆಯೋಜಿಸಲಾಗುತ್ತಿದೆ. ಮನೆಯಿಂದಲೇ ಧರ್ಮ ಜಾಗೃತಿ ಕಾರ್ಯ ಆರಂಭವಾಗಬೇಕು. ಸಮಾಜದಲ್ಲಿ ಇನ್ನೂ ಹೆಚ್ಚಿನ ಜನರಿಗೆ ಧರ್ಮ ಜಾಗೃತಿ ತಲುಪಿಸಬೇಕಿದೆ ಎಂದು ಹೇಳಿದರು.
ಯಾವುದೇ ರಾಜಕೀಯ ಪಕ್ಷ ಬಂದರೆ ಮಾತ್ರ ಧರ್ಮ ಬೆಳೆಯುತ್ತದೆ ಎಂಬ ಮನೋಭಾವನೆ ಬದಲಾಗಬೇಕು. ಸಮಾಜ ಗಟ್ಟಿಯಾಗಬೇಕು ಮತ್ತು ಧರ್ಮ ಜಾಗೃತಿಯಾಗಬೇಕು. ಜಾತಿ ಭೇದವನ್ನು ಬದಿಗಿಟ್ಟು ಹಿಂದು ಎಂಬ ಘೋಷವಾಕ್ಯಕ್ಕೆ ಆದ್ಯತೆ ನೀಡಬೇಕು ಎಂದರು.
ಸಮಿತಿಯ ಅಧ್ಯಕ್ಷ ಉಮೇಶ ನಾಯ್ಕ ಸರ್ಪನಕಟ್ಟೆ ಮಾತನಾಡಿ, ಗ್ರಾಮ ಗ್ರಾಮಗಳಲ್ಲಿ ಹಿಂದುತ್ವದ ಕಾರ್ಯಗಳು ನಡೆಯಬೇಕು. ಕೇವಲ ಕೇಸರಿ ಶಾಲಿಗೆ ಸೀಮಿತವಾಗದೇ ಧರ್ಮದ ಆಚರಣೆ ನಿತ್ಯ ಜೀವನದಲ್ಲಿ ಇರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರ್ಪನಕಟ್ಟೆಯ ಶ್ರೀ ವಾಸುಕೀ ಸರ್ಪ ದೇವಸ್ಥಾನದಿಂದ ಶೋಭಾಯಾತ್ರೆ ಆರಂಭವಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಣಂದೂರು ಕ್ರಾಸ್‌ನ ಯಲ್ವಡಿಕವೂರು ಜಟ್ಟಿಗೇಶ್ವರ ದೇವಸ್ಥಾನದ ಆವರಣದವರೆಗೆ ನಡೆಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸ್ವಾತಿ ಐತಾಳ ಮತ್ತು ಶ್ರೀಧರ ವೈಯಕ್ತಿಕ ಗೀತೆಯನ್ನು ಹಾಡಿದರು. ಜಯಂತ ನಾಯ್ಕ ಬೆಣಂದೂರು ಸ್ವಾಗತಿಸಿದರು. ಸಮಿತಿಯ ಗೌರವಾಧ್ಯಕ್ಷ ರಾಮಕೃಷ್ಣ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ನಾರಾಯಣ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ವಕೀಲ ಶಂಕರ ನಾಯ್ಕ ವಂದಿಸಿದರು.
Kshetra Samachara
16/03/2026 09:53 pm