ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳ: ಶಾಂತಿ, ಸೌಹಾರ್ದದಿಂದ ಹಬ್ಬ ಆಚರಿಸಿ – ತಹಶೀಲ್ದಾರ ನಾಗೇಂದ್ರ ಕೊಳಶೆಟ್ಟಿ ಕರೆ

ಭಟ್ಕಳ: ರಂಜಾನ್ ಹಬ್ಬ ಹಾಗೂ ಚನ್ನಪಟ್ಟಣ ಹನುಮಂತ ಜಾತ್ರೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎರಡು ಸಮುದಾಯಗಳ ನಾಯಕರು ಪರಸ್ಪರ ಸಹಕಾರದಿಂದ ಶಾಂತಿ ಕಾಪಾಡಿಕೊಂಡು ಹಬ್ಬಗಳನ್ನು ಸೌಹಾರ್ದದಿಂದ ಆಚರಿಸಬೇಕು ಎಂದು ತಹಶೀಲ್ದಾರ ನಾಗೇಂದ್ರ ಕೊಳಶೆಟ್ಟಿ ಹೇಳಿದರು.

ತಾಲೂಕು ಆಡಳಿತ ಸೌಧದ ಸಹಾಯಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಶ್ರೀ ಚೆನ್ನಪಟ್ಟಣ ಹನುಮಂತ ದೇವಸ್ಥಾನದಲ್ಲಿ ಮಾರ್ಚ್ 20ರಿಂದ ರಥೋತ್ಸವದ ಪೂರ್ವ ಸಿದ್ಧತಾ ಕಾರ್ಯಗಳು ಆರಂಭವಾಗಲಿದ್ದು, ಮಾರ್ಚ್ 25 ಹಾಗೂ 26ರಂದು ರಾತ್ರಿ ಪುಷ್ಪರಥೋತ್ಸವ ಮತ್ತು ಮಾರ್ಚ್ 27ರಂದು ಸಂಜೆ ಬ್ರಹ್ಮರಥೋತ್ಸವ ನಡೆಯಲಿದೆ ಎಂದು ತಿಳಿಸಿದರು.

ರಥಬೀದಿಯಲ್ಲಿ ಜನತಾ ಬ್ಯಾಂಕ್ ಸಮೀಪ ರಸ್ತೆಯಲ್ಲಿ ಹೊಂಡಗಳಿರುವ ಹಿನ್ನೆಲೆಯಲ್ಲಿ ಅವುಗಳನ್ನು ತಕ್ಷಣ ದುರಸ್ತಿಪಡಿಸಿ ಸ್ವಚ್ಛತೆ ಕಾಪಾಡುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬ್ರಹ್ಮರಥೋತ್ಸವದ ವೇಳೆ ರಥ ಸಾಗುವಾಗ ಅಂಗಡಿಗಳ ಮುಂಭಾಗದ ತಗಡಿನ ಶೀಟ್‌ಗಳು ಅಡಚಣೆ ಉಂಟುಮಾಡುವ ಸಾಧ್ಯತೆ ಇರುವುದರಿಂದ ಮುಂಚಿತವಾಗಿ ಪರಿಶೀಲಿಸಿ ಅವುಗಳನ್ನು ತೆರವುಗೊಳಿಸಲಾಗುವುದು ಎಂದು ನಗರ ಠಾಣೆಯ ವೃತ್ತ ನಿರೀಕ್ಷಕ ದಿವಾಕರ್ ಪಿ ಹೇಳಿದರು.

ತಾಲೂಕಿನ ಎಲ್ಲ ಧರ್ಮದ ಜನರು ಒಗ್ಗಟ್ಟಿನಿಂದ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಬೇಕು. ಒಳ್ಳೆಯ ಘಟನೆಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಕೆಟ್ಟವುಗಳನ್ನು ಮರೆಯಬೇಕು ಎಂದು ಡಿ.ವೈ.ಎಸ್.ಪಿ ಗಿರೀಶ ಬಿ ಹೇಳಿದರು.

ರಮ್ಜಾನ್ ಹಬ್ಬದಂದು ಬೆಳಿಗ್ಗೆ 7 ಗಂಟೆಗೆ ನಗರದ ಈದ್ಗಾ ಮೈದಾನದಲ್ಲಿ ನಮಾಜ್ ನಡೆಯಲಿದ್ದು, ಚಿನ್ನದಪಳ್ಳಿ ಭಾಗದಿಂದ ಮೆರವಣಿಗೆ

ಬರಲಿದೆ. ಈ ವೇಳೆ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಯಂತ್ರಿಸಲಾಗುವುದು ಎಂದು ಅವರು ತಿಳಿಸಿದರು. ಹಬ್ಬದ ಸಂದರ್ಭದಲ್ಲಿ ಅಪಘಾತಗಳನ್ನು ತಪ್ಪಿಸಲು ಅಪ್ರಾಪ್ತರಿಗೆ ವಾಹನ ನೀಡಬಾರದು ಎಂದು ಎಚ್ಚರಿಕೆ ನೀಡಿದರು.

ತಾಲೂಕು ಆಡಳಿತದಿಂದ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಏರ್ಪಡಿಸಲಿದೆ. ಮೆರವಣಿಗೆ ಪ್ರತಿವರ್ಷದಂತೆ ನಿಗದಿತ ಮಾರ್ಗದಲ್ಲೇ ಸಾಗಲಿದೆ ಎಂದು ಹೇಳಿದರು. ರಮ್ಜಾನ್ ಹಬ್ಬದಂದು ವಿದ್ಯುತ್ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದ್ದು, ಹೆಸ್ಕಾಂ ಅಧಿಕಾರಿ ಮಂಜುನಾಥ ನಾಯ್ಕ ಅವರು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಗ್ರಾಮೀಣ ಠಾಣೆಯ ವೃತ್ತ ನಿರೀಕ್ಷಕ ವೆಂಕಟೇಶ ಎಸ್., ಪಿ.ಎಸ್.ಐ ನವೀನ್ ನಾಯ್ಕ, ನಗರಸಭೆ ಉಪಾಧ್ಯಕ್ಷ ಅಲ್ತಾಫ್ ಖರೂರಿ, ತಂಜೀಮ್ ಮುಖಂಡರು ಹಾಗೂ ಹಿಂದೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

18/03/2026 10:07 pm

Cinque Terre

2.96 K

Cinque Terre

0

ಸಂಬಂಧಿತ ಸುದ್ದಿ