ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸೇವೆಯಿಂದ ಕೈಬಿಡುವ ನಿರ್ಧಾರಕ್ಕೆ ಆಶಾ ಕಾರ್ಯಕರ್ತೆಯರ ಆಕ್ರೋಶ - ಬೃಹತ್ ಪ್ರತಿಭಟನೆ!

ಧಾರವಾಡ: ರಾಜ್ಯ ಸರ್ಕಾರವು ಆಶಾ ಕಾರ್ಯಕರ್ತೆಯರ ಸಂಖ್ಯೆಯನ್ನು "ತರ್ಕಬದ್ಧಗೊಳಿಸುವ" ಹೆಸರಿನಲ್ಲಿ ಸೇವೆಯಿಂದ ವಜಾಗೊಳಿಸುವ ಕ್ರಮವನ್ನು ಖಂಡಿಸಿ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸದಸ್ಯರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ಸಾವಿರಾರು ಆಶಾ ಕಾರ್ಯಕರ್ತೆಯರನ್ನು ಸೇವೆಯಿಂದ ಕೈಬಿಡುವ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರಾಜ್ಯ ಸರ್ಕಾರವು ಈ ಹಿಂದೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಆಶಾ ಕಾರ್ಯಕರ್ತೆಯರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೇಂದ್ರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರನ್ನು ತರ್ಕಬದ್ಧಗೊಳಿಸುವ ನೆಪದಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೇವೆಯಿಂದ ಕೈಬಿಡಲಾಗುತ್ತಿದೆ. ಧಾರವಾಡ ಜಿಲ್ಲೆಯೊಂದರಲ್ಲೇ 349ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರನ್ನು ಕೈಬಿಡುವ ಪ್ರಕ್ರಿಯೆ ನಡೆಯುತ್ತಿದ್ದು, ಇದನ್ನು ಕೂಡಲೇ ನಿಲ್ಲಿಸಬೇಕು ಹಾಗೂ ಈ ಕುರಿತು ಅಧಿಕೃತ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿಗಳು ಜನವರಿ 2025ರಲ್ಲಿ ನೀಡಿದ ಭರವಸೆಯಂತೆ, ಪ್ರತಿ ಆಶಾ ಕಾರ್ಯಕರ್ತೆಗೆ ಕನಿಷ್ಠ 10,000 ರೂ. ಗೌರವಧನವನ್ನು ಖಾತರಿಪಡಿಸುವ ಕ್ರಮ ಕೈಗೊಳ್ಳಬೇಕು ಮತ್ತು ಈ ಕುರಿತು ಅಧಿಕೃತ ಆದೇಶ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ತಂಡ ಆಧಾರಿತ ಪ್ರೋತ್ಸಾಹಧನ (TBI) ಎಲ್ಲ ಆಶಾ ಕಾರ್ಯಕರ್ತೆಯರಿಗೆ ದೊರೆಯುವುದನ್ನು ಖಾತ್ರಿಪಡಿಸಬೇಕು. ಕಳೆದ ಮೂರು ವರ್ಷಗಳಿಂದ ಬಾಕಿ ಉಳಿದಿರುವ ಟಿಬಿ ಫಾಲೋಅಪ್ ಮುಕ್ತಾಯದ ಪ್ರೋತ್ಸಾಹಧನವನ್ನು ಕೂಡಲೇ ಪಾವತಿಸಬೇಕು ಎಂದೂ ಒತ್ತಾಯಿಸಲಾಯಿತು.

ವ್ಯಾಕ್ಸಿನ್ ಕ್ಯಾರಿಯರ್ ತರುವಂತೆ ಆಶಾ ಕಾರ್ಯಕರ್ತೆಯರನ್ನು ಒತ್ತಾಯಿಸಬಾರದು ಎಂಬ ರಾಜ್ಯ ಮತ್ತು ಜಿಲ್ಲಾ ಆದೇಶ/ಸುತ್ತೋಲೆಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರ (PHC) ಮಟ್ಟದಲ್ಲಿ ಪಾಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದರು. ಅಲ್ಲದೆ, ಪ್ರತಿ ತಿಂಗಳ 5ನೇ ತಾರೀಖಿನೊಳಗೆ ನಿಶ್ಚಿತ ಗೌರವಧನ ಹಾಗೂ ಇನ್ಸೆಂಟಿವ್ ಹಣ ಆಶಾಗಳಿಗೆ ದೊರೆಯುವಂತೆ ನೋಡಿಕೊಳ್ಳಬೇಕು. 2024-25ನೇ ಸಾಲಿಗೆ ಹೆಚ್ಚಳವಾದ ಒಂದು ವರ್ಷದ ಗೌರವಧನದ ಹಿಂಬಾಕಿ (ಮಾಸಿಕ 1500 ರೂ.) ಕೂಡಲೇ ಪಾವತಿಸಬೇಕು ಎಂದೂ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಭುವನಾ ಬಳ್ಳಾರಿ, ಮಂಜುಳಾ ಗಾಡಗೋಳಿ, ರಾಜೇಶ್ವರಿ ಕೋರಿ, ನಂದಾ ದೊಡ್ಡಮನಿ, ರೇಣುಕಾ ಹನಸಿ ಸೇರಿದಂತೆ ಹಲವು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/03/2026 05:31 pm

Cinque Terre

42.81 K

Cinque Terre

1

ಸಂಬಂಧಿತ ಸುದ್ದಿ