ಹುಬ್ಬಳ್ಳಿ : ಸುಡು ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟ ಮನಸ್ಸಿಗೆ ವರ್ಷದ ಮೊದಲ ಮಳೆ ಹೊಸ ಚೈತನ್ಯ ತಂದಿದೆ. ಆಕಾಶದಲ್ಲಿ ಕಪ್ಪು ಮೋಡಗಳು ಕವಿದು, ತಣ್ಣನೆಯ ಗಾಳಿ ಬೀಸಲು ಆರಂಭಿಸುತ್ತಿದ್ದಂತೆಯೇ ಮನಸ್ಸಿನಲ್ಲಿ ಒಂದು ವಿಶಿಷ್ಟ ಸಂತೋಷ ಮನೆಮಾಡಿತು. ಮಳೆಯ ಹನಿಗಳು ನೆಲವನ್ನು ಸ್ಪರ್ಶಿಸುತ್ತಿದ್ದಂತೆಯೇ ಮಣ್ಣಿನ ಸುವಾಸನೆ ಎಲ್ಲೆಡೆ ಹರಡಿ ಪ್ರಕೃತಿಯ ಸೌಂದರ್ಯವನ್ನು ಇನ್ನಷ್ಟು ಇಮ್ಮಡಿಗೊಳಿಸಿತು.
ಹೌದು ನೆಲವನ್ನು ತಟ್ಟುವ ಮಳೆಯ ಹನಿಗಳ ಸದ್ದು, ಮರಗಳ ಎಲೆಗಳ ಮೇಲೆ ಜಾರುವ ನೀರಿನ ತುಂತುರು, ಹಾಗೂ ಮಳೆಯಲ್ಲಿ ನಿರ್ಭಿಡೆಯಾಗಿ ಆಟವಾಡುವ ಮಕ್ಕಳ ದೃಶ್ಯ ಮನಸ್ಸಿಗೆ ಅದೆಷ್ಟು ಆನಂದ ತಂದಿತ್ತು ಎಂದರೆ ಅದನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ಇನ್ನೂ ಮೊದಲ ಮಳೆ ಎಲ್ಲರಿಗೂ ಒಂದೊಂದು ರೀತಿಯ ನೆನಪಿನ ಹೊಳೆ ಕೆಲವರು ತಮ್ಮ ಮನೆಗಳ ಮುಂದೆ ಕುಳಿತು ಮಳೆ ಹನಿಯ ಜೊತೆ ಮಾತನಾಡುತ್ತಾ ಬಿಸಿ ಬಿಸಿ ಚಹಾ ಸವಿಯುತ್ತ ಮಳೆಯ ಸೌಂದರ್ಯವನ್ನು ಮನಸಾರೆ ಆಸ್ವಾದಿಸುತ್ತಾರೆ.
ಮತ್ತೆ ಕೆಲವರು ತಮ್ಮ ಬಾಲ್ಯ ಜೀವನವನ್ನು ನೆನೆಯುತ್ತಾರೆ. ವರ್ಷದ ಮೊದಲ ಮಳೆ ಕೇವಲ ಹವಾಮಾನ ಬದಲಾವಣೆಯ ಸೂಚನೆ ಮಾತ್ರವಲ್ಲ, ಅದು ಹೊಸ ಪ್ರಾರಂಭದ, ಪ್ರಕೃತಿಯ ಪುನರುಜ್ಜೀವನದ ಸಂಕೇತವೂ ಹೌದು. ಮಳೆಗಾಲದ ಆಗಮನದೊಂದಿಗೆ ಪ್ರಕೃತಿ ಮತ್ತೆ ಹಸಿರಿನಿಂದ ಕಂಗೊಳಿಸಲು ಆರಂಭಿಸುತ್ತದೆ. ಹೀಗಾಗಿ, ಮೊದಲ ಮಳೆಯ ಅನುಭವ ಪ್ರತಿಯೊಬ್ಬರ ಜೀವನದಲ್ಲೂ ಮರೆಯಲಾಗದ ಸುಂದರ ನೆನಪಾಗಿ ಉಳಿಯುತ್ತದೆ.
ದೀರ್ಘಕಾಲದ ನಂತರ ಮೋಡ ಕವಿದ ವಾತಾವರಣ, ರಭಸವಾಗಿ ಬೀಸುವ ತಂಗಾಳಿ, ಗುಡುಗು ಮತ್ತು ಮಿಂಚುಗಳ ದೃಶ್ಯವನ್ನು ನೋಡುವುದು ಅತೀವ ಸಂತೋಷವನ್ನು ತಂದಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಯೂ ಈ ವರ್ಷದ ಮೊದಲ ಮಳೆಯನ್ನು ಆನಂದಿಸಿ ಪ್ರತಿ ಮನಸ್ಸುಗಳು ಪುಳುಕಿತಗೊಂಡಿರುವುದಂತೂ ಸುಳ್ಳಲ್ಲ...
ತನುಶ್ರೀ ಬಸವರಾಜ ಅಡಿವೆಣ್ಣವರ ಕೆಎಲ್‌ಇ ಕಾಲೇಜ್ ವಿದ್ಯಾರ್ಥಿನಿ ಹುಬ್ಬಳ್ಳಿ
Kshetra Samachara
17/03/2026 07:00 pm
LOADING...