ಶಿರಸಿ : ತಾಲೂಕಿನ ಕಾನಗೋಡದಲ್ಲಿ ಸ್ಥಳೀಯ ಯುಗಾದಿ ಉತ್ಸವ ಸಮಿತಿ ಆಯೋಜಿಸಿದ್ದ ಯುಗಾದಿ ಉತ್ಸವ, ಸನ್ಮಾನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು. ಈ ಸಂದರ್ಭದಲ್ಲಿ ಶೋಭಾಯಾತ್ರೆಯು ಗಮನ ಸೆಳೆಯಿತು.
ಹಿಂದೂ ಸಂಘಟನೆಗೆ ಸಂಸದರ ಕರೆ
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಯುಗಾದಿಯು ಸಮಸ್ತ ಹಿಂದೂಗಳ ಸಂಭ್ರಮದ ಹಬ್ಬವಾಗಿದೆ. ಇದು ವರ್ಷದ ಆರಂಭದಲ್ಲೇ ಸಂಘಟನಾತ್ಮಕ ರೂಪುರೇಷೆಗಳಿಗೆ ಭದ್ರ ಬುನಾದಿ ಹಾಕಿ ಒಗ್ಗಟ್ಟಿನ ಸಂಕೇತವನ್ನು ಎತ್ತಿ ತೋರಿಸುತ್ತದೆ ಎಂದರು. ಪರಕೀಯರ ದಾಳಿ ಹಾಗೂ ಸಮಾಜಘಾತುಕ ಕಾರ್ಯಚಟುವಟಿಕೆಗಳನ್ನು ಹಿಮ್ಮೆಟ್ಟಿಸಲು ಹಿಂದೂಗಳ ಸಂಘಟನೆ ಮತ್ತು ಸಮಾವೇಶಗಳು ಅತ್ಯಂತ ಮಹತ್ವದ್ದಾಗಿವೆ. ಇದು ಭಾವನಾತ್ಮಕ ವಿಚಾರಗಳನ್ನು ಹಂಚಿಕೊಳ್ಳುವ ವೇದಿಕೆಯೂಎಂದು ಅವರು ಪ್ರತಿಪಾದಿಸಿದರು.
ದೇಶ ರಕ್ಷಣೆಗೆ ಜವಾಬ್ದಾರಿಯುತ ಸಂಘಟನೆ
ಉದ್ಯಮಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಉಪೇಂದ್ರ ಪೈ ಮತ್ತು ಅನಂತಮೂರ್ತಿ ಹೆಗಡೆ ಅವರು ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಸಮಾಜದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಂತಹ ಘಟನೆಗಳನ್ನು ವಿವರಿಸಿದರು. ಹಿಂದೂಗಳು ಎಚ್ಚೆತ್ತುಕೊಂಡು, ದೇಶದ ರಕ್ಷಣೆಯಲ್ಲಿ ಜವಾಬ್ದಾರಿಯುತವಾಗಿ ಸಂಘಟಿತರಾಗಬೇಕು ಎಂದು ಕರೆ ನೀಡಿದರು.
ಸಾಧಕರಿಗೆ ಸನ್ಮಾನ ಮತ್ತು ಸಮಿತಿಯ ಕಾರ್ಯವೈಖರಿ
ಕಾನಗೋಡ ಯುಗಾದಿ ಸಮಿತಿ ಅಧ್ಯಕ್ಷ ಸುರೇಶ ನಾಯ್ಕ ಕಾನಗೋಡ ಅವರು ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಸಮಿತಿಯು ಕಳೆದ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕಾರ್ಯಚಟುವಟಿಕೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸ್ಥಳೀಯವಾಗಿ ಸಾಧನೆ ಮಾಡಿದ ಸಿಎ ರಮೇಶ ನಾಯ್ಕ ಹಳ್ಳಿಕಾನ ಹಾಗೂ ಸಿಎ ಮಧು ಹೆಗಡೆ ಕಾನಗೋಡ ಅವರನ್ನು ಶಾಲು ಹೊದೆಸಿ, ಸ್ಮರಣಿಕೆಯೊಂದಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಯುಗಾದಿ ಉತ್ಸವ ಸಮಿತಿ ಸದಸ್ಯರಾದ ಡಿ.ವಿ.ಹೆಗಡೆ ಕಾನಗೋಡ, ರಾಮಚಂದ್ರ ಪಟಗಾರ, ಸತೀಶ ದೇಶಭಂಡಾರಿ, ಅಶೋಕ ಹೆಗಡೆ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ ನಾಯ್ಕ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಉತ್ಸವದ ಪೂರ್ವಭಾವಿಯಾಗಿ ಏರ್ಪಡಿಸಲಾಗಿದ್ದ ರಂಗೋಲಿ ಸೇರಿದಂತೆ ಇನ್ನಿತರ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶ್ರೀ ಸೋಮೇಶ್ವರ ಭಜನಾ ಮಂಡಳಿಯ ಮಾತೆಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭಾ ಕಾರ್ಯಕ್ರಮವನ್ನು ಗಿರಿಧರ ಕಬನಳ್ಳಿ ನಿರೂಪಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿ ಗಾಂವ್ಕರ ಹೊಳೆಕೈ ವಂದನಾರ್ಪಣೆ ಮಾಡಿದರು.
ಶೋಭಾಯಾತ್ರೆ ಮತ್ತು ಮನರಂಜನಾ ಕಾರ್ಯಕ್ರಮಗಳು
ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಕಾನಗೋಡದಿಂದ ನಿಲೇಕಣಿ ಹಾಗೂ ಕಾನಸೂರು ವರೆಗೆ ಊರ ನಾಗರಿಕರು ಬೈಕ್ ರ್ಯಾಲಿ ಮೂಲಕ ಶಿಸ್ತುಬದ್ಧವಾದ ಶೋಭಾಯಾತ್ರೆಯನ್ನು ನಡೆಸಿದರು. ನಂತರ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ದಿವ್ಯಾ ಹೆಗಡೆ ಸಂಗಡಿಗರಿಂದ ರಸಮಂಜರಿ ಹಾಗೂ ಶಿರಸಿ ಸ್ಮಾರ್ಟ್ ಡ್ಯಾನ್ಸ್ ಗ್ರೂಪ್‌ನ ರಾಘವೇಂದ್ರ ಮೂಳೆ ಸಂಗಡಿಗರಿಂದ ಆಕರ್ಷಕ ನೃತ್ಯ ಕಾರ್ಯಕ್ರಮಗಳು ತಡರಾತ್ರಿವರೆಗೂ ಯಶಸ್ವಿಯಾಗಿ ನಡೆದವು.
Kshetra Samachara
20/03/2026 06:48 pm