ಕೂಡ್ಲಿಗಿ : ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ನಕಲಿ ಬಂಗಾರವನ್ನು ಅಸಲಿ ಎಂದು ನಂಬಿಸಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಜಾಲವನ್ನು ಕಾನಾಹೊಸಹಳ್ಳಿ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಕಲಿ ಬಂಗಾರವನ್ನು ಅಸಲಿ ಎಂದು ನಂಬಿಸಿ ಬಡ ಜನರಿಗೆ ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ಬರೋಬ್ಬರಿ 29.50 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಬಂಧನ
ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಈ ವಂಚಕರನ್ನು ಸೆರೆಹಿಡಿದಿದ್ದಾರೆ. ಬಂಧಿತರನ್ನು ಕೂಡ್ಲಿಗಿ ತಾಲೂಕಿನ ಕೊರಚರಹಟ್ಟಿ ಗ್ರಾಮದ ಸುರೇಶ್ ಅಲಿಯಾಸ್ ರಮೇಶ್ (32) ಮತ್ತು ಸೋಮಣ್ಣ (40) ಎಂದು ಗುರುತಿಸಲಾಗಿದೆ.
ವಂಚನೆಯ ವಿಧಾನ ಮತ್ತು ಹಣ ವಶ
ಆರೋಪಿಗಳು, ನಮ್ಮ ಬಳಿ ಒಂದು ಕೆ.ಜಿ. ಚಿನ್ನವಿದೆ, ಅದನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆ ಎಂದು ನಂಬಿಸಿ, ಬಿ. ಕುಮಾರ್ ಎಂಬುವರನ್ನು ಕ್ಯಾಸನಕೆರೆ ಅರಣ್ಯ ಪ್ರದೇಶಕ್ಕೆ ಕರೆದೊಯ್ದು, ಬೆದರಿಸಿ 3 ಲಕ್ಷ ರೂಪಾಯಿ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ವಂಚನೆಗೊಳಗಾದ ಬಿ. ಕುಮಾರ್ ಅವರು ಕಾನಾಹೊಸಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ, ಬರೋಬ್ಬರಿ 29.50 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಕಾರ್ಯಾಚರಣೆಗೆ ಪ್ರಶಂಸೆ
ದೂರು ದಾಖಲಿಸಿಕೊಂಡ ಕೂಡಲೇ ಪೊಲೀಸರು ತನಿಖೆಗಿಳಿದು, ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಪ್ರಕರಣವನ್ನು ಭೇದಿಸಲು ಶ್ರಮಿಸಿದ ಪೊಲೀಸ್ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ) ಜಾಹ್ನವಿ ಅವರು ಪ್ರಶಂಸಿಸಿದ್ದಾರೆ.
PublicNext
21/03/2026 06:59 pm
LOADING...