ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರದೇಶದ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜನಗಣತಿ-2027 ಮನೆಪಟ್ಟಿ ಮತ್ತು ವಸತಿ ಗಣತಿ ಕಾರ್ಯವು ದಿನಾಂಕ ಏಪ್ರಿಲ್ 16, 2026 ರಿಂದ ಮೇ 15, 2026 ರವರೆಗೆ ನಡೆಯಲಿದ್ದು, ಈ ಸಮೀಕ್ಷಾ ಕಾರ್ಯಕ್ಕೆ 4678 ಗಣತಿದಾರರು, 798 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿರುತ್ತದೆ.
ಬೆಂಗಳೂರಿನ ಗಾರ್ವೆಬಾವಿ ಪಾಳ್ಯದಲ್ಲಿ ಇರುವ ಆಕ್ಸ್ ಫರ್ಡ್ ಇಂಜಿನಿಯರಿಂಗ್ ತರಬೇತಿ ಕೇಂದ್ರದಲ್ಲಿ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ನೀಡಲಾಗುತ್ತಿದ್ದ ತರಬೇತಿಯನ್ನು ಪರಿಶೀಲಿಸಿದ ಪ್ರಧಾನ ಜನಗಣತಿ ಅಧಿಕಾರಿ ಹಾಗೂ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಶ್ರೀ ಕೆ ಎನ್ ರಮೇಶ್ ರವರು ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು ಜನಗಣತಿ ಸಿಬ್ಬಂದಿಗೆ ದಿನಾಂಕ:06-04-2026ರಿಂದ ದಿನಾಂಕ 08-04-2026ರವರೆಗೆ ಒಟ್ಟು 16 ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆ.
ರಾಷ್ಟ್ರೀಯ ಜನಗಣತಿ 2027 ಕಾರ್ಯಕ್ಕೆ ನಿಯೋಜಿಸಲಾದ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ಮನೆ ಪಟ್ಟಿ ಸಿದ್ಧತೆಗಾಗಿ ರೂ.9000 ಹಾಗೂ ಜನಗಣತಿ ಕಾರ್ಯಕ್ಕಾಗಿ ರೂ.16000 ಒಟ್ಟು ರೂ. 25000/- ಗಳ ಗೌರವಧನ ಭಾರತ ಸರ್ಕಾರದ ಆದೇಶದಂತೆ ನೀಡಲಾಗುತ್ತದೆ. ಅಲ್ಲದೆ ದಿನಕ್ಕೆ ರೂ.400 ರಂತೆ ತರಬೇತಿ ಭತ್ಯೆಯನ್ನು ಸಹ ನೀಡಲಾಗುತ್ತದೆ ಎಂದು ಕೆ ಎನ್ ರಮೇಶ್ ರವರು ತಿಳಿಸಿದರು.
ಪ್ರಧಾನ ಜನಗಣತಿ ಅಧಿಕಾರಿಯಾದ ಶ್ರೀ ಕೆ ಎನ್ ರಮೇಶ್ ರವರು ಇಂದು ಗಾರ್ವೆಬಾವಿಪಾಳ್ಯದಲ್ಲಿರುವ ತರಬೇತಿ ಕೇಂದ್ರ ಪರಿಶೀಲನೆ ವೇಳೆ ಆಕ್ಸ್ ಫರ್ಡ್ ಇಂಜಿನಿಯರಿಂಗ್ ಕಾಲೇಜು ಮುಖ್ಯಸ್ಥರನ್ನು ಭೇಟಿ ನೀಡಿ ದಿನಾಂಕ 15-04-2026 ರವರೆಗೆ ಸ್ವಯಂ ಗಣತಿಗಾಗಿ ಅವಕಾಶ ಇರುವುದರಿಂದ ಕಾಲೇಜಿನ ಮುಖ್ಯಸ್ಥರು, ಬೋಧನ ಸಿಬ್ಬಂದಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ವಯಂ ಗಣತಿಯಲ್ಲಿ ಭಾಗವಹಿಸುವಂತೆ ಕೋರಿದರು. ಸ್ವಯಂ ಗಣತಿ ಕಾರ್ಯಕ್ಕೆ ಕಾಲೇಜಿನ ಮುಖ್ಯಸ್ಥರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸ್ವಯಂ ಗಣತಿ ಕಾರ್ಯಕ್ಕೆ ವಿದ್ಯಾರ್ಥಿಗಳಿಂದ ಹಿಡಿದು ಕಾಲೇಜಿನ ಮುಖ್ಯಸ್ಥರವರೆಗೆ ಪ್ರತಿಯೊಬ್ಬರು ಪಾಲ್ಗೊಳ್ಳುವುದಾಗಿ ತಿಳಿಸಿದರು.
ಈ ವೇಳೆ ಜಂಟಿ ಆಯುಕ್ತರಾದ ಶ್ರೀ ಸತೀಶ್ ಬಾಬು, ಉಪ ಆಯುಕ್ತರಾದ ಶ್ರೀ ಡಿ ಕೆ ಬಾಬು ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
PublicNext
06/04/2026 07:15 pm