ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗಣತಿದಾರರ ತರಬೇತಿ ಕೇಂದ್ರಕ್ಕೆ ಆಯುಕ್ತರ ಭೇಟಿ - ಸಕ್ರಿಯವಾಗಿ ಗಣತಿ ಕಾರ್ಯ ನಿರ್ವಹಿಸಲು ಸೂಚನೆ

ಬೆಂಗಳೂರು: ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ.ಅವರು ಇಂದು ಜನಗಣತಿ 2027 ಕಾರ್ಯಕ್ರಮದ ಅಂಗವಾಗಿ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ಆಯೋಜಿಸಲಾದ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತರಬೇತಿ ಕಾರ್ಯದಲ್ಲಿ ಪಾಲ್ಗೊಂಡು ಅಗತ್ಯ ಮಾರ್ಗದರ್ಶನ ನೀಡಿದರು.

ಮೊದಲು ಮಲ್ಲೇಶ್ವರಂ ವಿಭಾಗದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ ಅವರು, ತರಬೇತಿ ನಡೆಯುತ್ತಿದ್ದ ತರಗತಿಯಲ್ಲಿ ಗಣತಿದಾರರು ಹಾಗೂ ಮೇಲ್ವಿಚಾರಕರೊಂದಿಗೆ ಕುಳಿತುಕೊಂಡು ತರಬೇತಿ ಕ್ರಮಗಳನ್ನು ಸಮಗ್ರವಾಗಿ ವೀಕ್ಷಿಸಿದರು. ತರಬೇತಿಯ ಗುಣಮಟ್ಟ, ವಿಷಯವಸ್ತುಗಳ ಅರ್ಥೈಸುವಿಕೆ ಹಾಗೂ ಕಾರ್ಯಪದ್ಧತಿಯ ಅನುಷ್ಠಾನ ಕುರಿತು ಮಾಹಿತಿ ಪಡೆದುಕೊಂಡರು. ಈ ವೇಳೆ ಮಾತನಾಡಿದ ಅವರು, ಜನಗಣತಿ ದೇಶದ ಅತ್ಯಂತ ಮಹತ್ವದ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಪ್ರತಿಯೊಬ್ಬ ಗಣತಿದಾರರು ತಮ್ಮ ಕರ್ತವ್ಯಗಳನ್ನು ಅತ್ಯಂತ ಜವಾಬ್ದಾರಿಯಿಂದ, ನಿಷ್ಠೆಯಿಂದ ಮತ್ತು ನಿಖರತೆಯಿಂದ ನಿರ್ವಹಿಸಬೇಕೆಂದು ತಿಳಿಸಿದರು.

ತರಬೇತಿ ಕೇಂದ್ರದಲ್ಲಿ ಗಣತಿದಾರರೊಂದಿಗೆ ಸಂವಾದ ನಡೆಸಿ, ಅವರ ಅನುಭವಗಳು ಹಾಗೂ ಅಭಿಪ್ರಾಯಗಳನ್ನು ಆಲಿಸಿದರು. ಟೀ ಸೇವನೆಯ ವೇಳೆ ಎಲ್ಲರೂ ತಪ್ಪದೇ ಸ್ವಯಂ ಗಣತಿ (Self Enumeration) ಪ್ರಕ್ರಿಯೆಯನ್ನು ಸರಿಯಾಗಿ ಅನುಸರಿಸಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಸೂಚಿಸಿದರು. ಡಿಜಿಟಲ್ ವಿಧಾನಗಳ ಬಳಕೆ, ಮಾಹಿತಿಯ ನಿಖರತೆ ಹಾಗೂ ಸಮಯಪಾಲನೆಯ ಮಹತ್ವವನ್ನು ವಿಶೇಷವಾಗಿ ಒತ್ತಿ ಹೇಳಿದರು.

ಮುಂದುವರಿದು ರಾಜಾಜಿನಗರದ ಕೆ.ಎಲ್.ಇ. ನಿಜಲಿಂಗಪ್ಪ ಕಾಲೇಜಿಗೆ ಭೇಟಿ ನೀಡಿದ ಅವರು, ಅಲ್ಲಿನ ತರಬೇತಿ ಕಾರ್ಯವನ್ನು ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ನೀಡಿದರು.

ಗೋವಿಂದರಾಜನಗರ ವಿಭಾಗದ ಗಣತಿದಾರರು ಹಾಗೂ ಮೇಲ್ವಿಚಾರಕರೊಂದಿಗೆ ಭೋಜನ ಮಾಡಿ, ಅವರೊಂದಿಗೆ ಸ್ನೇಹಪೂರ್ಣವಾಗಿ ಮಾತುಕತೆ ನಡೆಸಿ, ಕಾರ್ಯನಿರ್ವಹಣೆಯಲ್ಲಿ ಎದುರಾಗುವ ಸವಾಲುಗಳು ಹಾಗೂ ಅವುಗಳಿಗೆ ಪರಿಹಾರಗಳ ಬಗ್ಗೆ ಚರ್ಚಿಸಿದರು. ಜನಗಣತಿ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಎಲ್ಲರೂ ಸಮನ್ವಯದಿಂದ ಮತ್ತು ಸಕ್ರಿಯವಾಗಿ ಭಾಗವಹಿಸುವಂತೆ ಸಿಬ್ಬಂದಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಜಂಟಿ ಆಯುಕ್ತರಾದ ಸಂಗಪ್ಪ, ವಿವಿಧ ವಿಭಾಗಗಳ ಕಾರ್ಯಪಾಲಕ ಅಭಿಯಂತರರು, ಕಂದಾಯ ಅಧಿಕಾರಿಗಳು, ಚಾರ್ಜ್ ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.

Edited By : Nagaraj Tulugeri
PublicNext

PublicNext

06/04/2026 07:21 pm

Cinque Terre

10.06 K

Cinque Terre

0

ಸಂಬಂಧಿತ ಸುದ್ದಿ