ಶಿವಮೊಗ್ಗ : ಹೆಚ್ಚಿನ ಲಾಭದ ಆಸೆ ತೋರಿಸಿ ಮೊಬೈಲ್ ಆಪ್ ಮೂಲಕ ಹೂಡಿಕೆ ಮಾಡಿಸಿಕೊಂಡು, ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 53.10 ಲಕ್ಷ ರೂಪಾಯಿಗಳನ್ನು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ದೂರುದಾರರಿಗೆ ಅಪರಿಚಿತ ವ್ಯಕ್ತಿಯೊಬ್ಬರು ವಾಟ್ಸ್ ಆಪ್ ಮೂಲಕ ಮೆಸೇಜ್ ಕಳುಹಿಸಿ, ಪ್ರೊಸ್ಟಾಕ್ ಎಂಬ ಟ್ರೇಡಿಂಗ್ ಕಂಪನಿಯ ಅಪ್ಲಿಕೇಶನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲಿ ದೊಡ್ಡ ಮೊತ್ತದ ಲಾಭ ಗಳಿಸಬಹುದು ಎಂದು ನಂಬಿಸಿದ್ದರು. ಇದನ್ನು ಸತ್ಯವೆಂದು ನಂಬಿದ ಸಂತ್ರಸ್ತರು, ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತಹಂತವಾಗಿ ಒಟ್ಟು 53,10,000 ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ.
ಹಣ ಹೂಡಿಕೆ ಮಾಡಿದ ನಂತರ ಸಂತ್ರಸ್ತರು ತಮ್ಮ ಲಾಭಾಂಶ ಮತ್ತು ಅಸಲನ್ನು ಹಿಂಪಡೆಯಲು ಪ್ರಯತ್ನಿಸಿದಾಗ, ಆರೋಪಿಗಳು ಎರಡು-ಮೂರು ದಿನಗಳಲ್ಲಿ ಹಣ ನಿಮ್ಮ ಖಾತೆಗೆ ಜಮಾ ಆಗಲಿದೆ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ಆದರೆ, ಕೆಲವು ದಿನಗಳ ನಂತರ ‘ಪ್ರೊಸ್ಟಾಕ್’ ಆಪ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ. ಅನುಮಾನಗೊಂಡ ದೂರುದಾರರು ವಾಟ್ಸ್ ಆಪ್ ಮೂಲಕ ಸಂಪರ್ಕಿಸಲು ಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಈ ಸಂಬಂಧ ದೂರುದಾರರು ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ.
Kshetra Samachara
28/04/2026 04:55 pm
LOADING...