ಶಿವಮೊಗ್ಗ : ಒಣಹಾಕಿದ್ದ ಅಡಿಕೆಯನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಶಿರಾಳಕೊಪ್ಪ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕಳುವಾಗಿದ್ದ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ್ದ ಗೂಡ್ಸ್ ವಾಹನ ವಶಕ್ಕೆ ಪಡೆಯಲಾಗಿದೆ.
ಶಿಕಾರಿಪುರ ತಾಲೂಕಿನ ಹುಣಸೇಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿತ್ತು. ಭುವನೇಶ್ವರ್ ಎಂಬುವವರು ತಮ್ಮ ಮನೆಯ ಮುಂದಿನ ಖಾಲಿ ಜಾಗದಲ್ಲಿ ಸುಮಾರು 16 ಕ್ವಿಂಟಾಲ್ ಸಿಪ್ಪೆ ಗೋಟು ಅಡಿಕೆ ಒಣಹಾಕಿದ್ದರು. ಈ ಪೈಕಿ ಸುಮಾರು 1,00,000 ಮೌಲ್ಯದ 4 ಕ್ವಿಂಟಾಲ್ ಅಡಿಕೆಯನ್ನು ಕಿಡಿಗೇಡಿಗಳು ಕಳ್ಳತನ ಮಾಡಿದ್ದರು. ಈ ಕುರಿತು ಮಾರ್ಚ್ 28ರಂದು ಶಿರಾಳಕೊಪ್ಪ ಠಾಣೆಯಲ್ಲಿ ದೂರು ದಾಖಲಾಗಿತ್ತು. ಶಿಕಾರಿಪುರ ಇನ್ಸ್‌ಪೆಕ್ಟರ್ ಸಂತೋಷ್ ಎಂ.ಪಾಟೀಲ್, ಶಿರಾಳಕೊಪ್ಪ ಪಿಎಸ್ಐ ಪ್ರಶಾಂತ ಕುಮಾರ ಟಿ.ಬಿ. ನೇತೃತ್ವದ ತಂಡವು ತನಿಖೆ ನಡೆಸಿತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಕಳುವಾಗಿದ್ದ ಅಡಿಕೆ ಮತ್ತು ಕೃತ್ಯಕ್ಕೆ ಬಳಸಿದ್ದ ಗೂಡ್ಸ್ ವಾಹನವನ್ನು ವಶಕ್ಕೆ ಪಡೆದ ಶಿರಾಳಕೊಪ್ಪ ಠಾಣೆ ಪೊಲೀಸರು.
ಮಹಮ್ಮದ್ ಮನ್ಸೂರ್ (30),ಶಹಾದ್ ಉಲ್ಲಾ (35), ಗಬ್ಬೂರು ಬಂಧಿತ ಆರೋಪಿಗಳು. ಬಂಧಿತರಿಂದ 10 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ 4 ಕ್ವಿಂಟಾಲ್ ಸಿಪ್ಪೆ ಗೋಟು ಅಡಿಕೆ ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ 1,00,000 ಎಂದು ಅಂದಾಜಿಸಲಾಗಿದೆ. ಇನ್ನು, ಕೃತ್ಯಕ್ಕೆ ಬಳಸಿದ್ದ ಮಾರುತಿ ಸುಜುಕಿ ಸೂಪರ್ ಕ್ಯಾರಿ ಗೂಡ್ಸ್ ವಾಹನವನ್ನು ಸೀಜ್ ಮಾಡಲಾಗಿದೆ. ಇದರ ಮೌಲ್ಯ 5,00,000 ಎಂದು ಅಂದಾಜಿಸಲಾಗಿದೆ.
Kshetra Samachara
30/04/2026 07:43 pm
LOADING...