ಧಾರವಾಡ: ಸರಿಯಾದ ಸಮಯಕ್ಕೆ ಬಸ್ ಬಿಡುತ್ತಿಲ್ಲ ಎಂದು ಆರೋಪಿಸಿ ಧಾರವಾಡ ಗ್ರಾಮಾಂತರ ಹಾಗೂ ಉಪ ನಗರ ಸಾರಿಗೆ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ತಡೆದು ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಧಾರವಾಡ ತಾಲೂಕು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಸರಿಯಾಗಿ ಗ್ರಾಮೀಣ ಸಾರಿಗೆ ಬಸ್‌ಗಳು ಹೋಗುತ್ತಿಲ್ಲ, ಇದರಿಂದ ವಿದ್ಯಾರ್ಥಿಗಳು ಹಾಗೂ ಜನರು ಪ್ರತಿನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಪ್ರತಿನಿತ್ಯ ಧಾರವಾಡ ಜಿಲ್ಲೆಯ ಮೊರಬ, ತಡಕೋಡ, ಹಂಗರಕ್ಕಿ, ಲೋಕೂರು, ಬ್ಯಾಲ್ಯಾಳ, ಗುಮಗೋಳ, ಕವಲಗೇರಿ, ಕರಡಿಗುಡ್ಡ, ಲಕಮಾಪೂರ, ಯಾದವಾಡ, ಗರಗ ಸೇರಿದಂತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಾಲೇಜುಗಳಿಗೆ ಹೋಗಲು ಬಸ್ ಸೌಲಭ್ಯವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಸಾರಿಗೆ ಸಂಸ್ಥೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಬಸ್ ಸೌಲಭ್ಯ ಸರಿಯಾಗಿ ಕಲ್ಪಿಸುವವರೆಗೆ ಯಾವುದೇ ಕಾರಣಕ್ಕೂ ಬಸ್ ಒಂದು ಹೆಜ್ಜೆಯೂ ಮುಂದೆ ಬಿಡುವುದಿಲ್ಲ, ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಘೋಷಣೆ ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿಸಲು ಹರಸಾಹಸ ಪಡುವ ದೃಶ್ಯಗಳು ಕಂಡುಬಂದವು
ವರದಿ: ಮಂಜುನಾಥ ಕವಳಿ ಪಬ್ಲಿಕ್ ನೆಕ್ಸ್ಟ್ ಧಾರವಾಡ.
Kshetra Samachara
28/04/2026 06:00 pm
LOADING...