ನವದೆಹಲಿ: ಚುನಾವಣಾ ಆಯೋಗ (ECI) ನಡೆಸುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision - SIR) ಪ್ರಕ್ರಿಯೆ ವಿರುದ್ಧ ಎದ್ದಿದ್ದ ರಾಜಕೀಯ ಮತ್ತು ಕಾನೂನು ಸಮರಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ತೆರೆ ಎಳೆದಿದೆ. ಆಯೋಗದ ಅಧಿಕಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ತಳ್ಳಿಹಾಕಿದ ನ್ಯಾಯಪೀಠ, SIR ಕ್ರಮವು ಕಾನೂನುಬದ್ಧವಾಗಿದ್ದು, ಸ್ವಚ್ಛ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಇದು ಅತ್ಯಗತ್ಯ ಎಂದು ಮಹತ್ವದ ತೀರ್ಪು ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ, ಇಂತಹ SIR ಪ್ರಕ್ರಿಯೆ ನಡೆಸಲು ಚುನಾವಣಾ ಆಯೋಗಕ್ಕೆ ಸಂಪೂರ್ಣ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿದೆ. ಆಯೋಗ ತನ್ನ ಅಧಿಕಾರ ವ್ಯಾಪ್ತಿ ಮೀರಿಲ್ಲ, ಅಲ್ಲದೆ, ಬಿಹಾರ ಮತದಾರರ ಪಟ್ಟಿಯ SIR ಪ್ರಕ್ರಿಯೆ ಜನಪ್ರತಿನಿಧಿತ್ವ ಕಾಯ್ದೆ (RP Act) ಅಥವಾ ಸಂವಿಧಾನದ ಯಾವುದೇ ವಿಧಿಯನ್ನು ಉಲ್ಲಂಘಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ. ಮತದಾರರ ಪಟ್ಟಿಯ ಶುದ್ಧತೆ ಕಾಪಾಡುವುದು ಹಾಗೂ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಖಚಿತಪಡಿಸುವ ಉದ್ದೇಶದಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯಾಯಪೀಠ ಒತ್ತಿ ಹೇಳಿದೆ. ಹೆಸರುಗಳನ್ನು ತೆಗೆದುಹಾಕುವ ಹಂತ ಹಂತದ ವಿಧಾನ, ಆಕ್ಷೇಪಣೆ ಸಲ್ಲಿಸಲು ಅವಕಾಶ ಹಾಗೂ ಇತರೆ ಭದ್ರತಾ ಕ್ರಮಗಳು ಈ ಪ್ರಕ್ರಿಯೆಯನ್ನು ನ್ಯಾಯಸಮ್ಮತ ಮತ್ತು ಏಕಪಕ್ಷೀಯವಲ್ಲದಂತಾಗಿಸುತ್ತವೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. SIR ಪ್ರಕ್ರಿಯೆಯಲ್ಲಿ ಅಳವಡಿಸಲಾಗಿರುವ ಸುರಕ್ಷತಾ ಕ್ರಮಗಳು ಮತದಾರರ ಪಟ್ಟಿಯ ಸಮಗ್ರತೆಯನ್ನು ಕಾಪಾಡಲು ಸಹಕಾರಿಯಾಗುತ್ತವೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಪೀಠದ ಪರಿಶೀಲನೆ
ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ SIR ಪ್ರಕ್ರಿಯೆಯ ಸಂವಿಧಾನಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿತ್ತು. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಲ್ಯ ಬಾಗ್ಚಿ ಮತ್ತು ವಿ.ಎಂ. ಪಂಚೋಲಿ ಅವರನ್ನೊಳಗೊಂಡ ಪೀಠ ಜನವರಿ 29ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು. ಸಂವಿಧಾನದ ಕಲಂ 326, ಜನಪ್ರತಿನಿಧಿತ್ವ ಕಾಯ್ದೆ 1950 ಹಾಗೂ ಮತದಾರರ ನೋಂದಣಿ ನಿಯಮಾವಳಿ 1960ರ ಅಡಿಯಲ್ಲಿ ಚುನಾವಣಾ ಆಯೋಗಕ್ಕೆ ಇಂತಹ SIR ನಡೆಸುವ ಅಧಿಕಾರವಿದೆಯೇ ಎಂಬ ಪ್ರಶ್ನೆಯನ್ನು ನ್ಯಾಯಾಲಯ ಕೂಲಂಕಷವಾಗಿ ಪರಿಶೀಲಿಸಿತು.
ಅರ್ಜಿದಾರರು ಮತ್ತು ಅವರ ವಾದ
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR), ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (PUCL), ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಆರ್‌ಜೆಡಿ ನಾಯಕ ಮನೋಜ್ ಝಾ, ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್, ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಸೇರಿದಂತೆ ಹಲವು ಸಂಘಟನೆಗಳು ಹಾಗೂ ರಾಜಕೀಯ ನಾಯಕರು ಈ ಅರ್ಜಿಗಳನ್ನು ಸಲ್ಲಿಸಿದ್ದರು. 2025ರ ಜೂನ್ 24ರಂದು ಚುನಾವಣಾ ಆಯೋಗ ಹೊರಡಿಸಿದ್ದ SIR ಆದೇಶವನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ಈ ಕ್ರಮವು ಸಂವಿಧಾನದ ಕಲಂ 14, 19, 21, 325 ಮತ್ತು 326ರ ಉಲ್ಲಂಘನೆ ಎಂದು ಅವರು ವಾದಿಸಿದ್ದರು.
ಚುನಾವಣಾ ಆಯೋಗದ ಸಮರ್ಥನೆ
ಆದರೆ, ಚುನಾವಣಾ ಆಯೋಗ ತನ್ನ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು, ಮತದಾರರ ಪಟ್ಟಿಯ ಪಾರದರ್ಶಕತೆ ಮತ್ತು ನಿಖರತೆ ಕಾಪಾಡಲು ಈ ಪ್ರಕ್ರಿಯೆ ಅತ್ಯಗತ್ಯವಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಇದಕ್ಕೂ ಮೊದಲು ಜುಲೈ 28ರಂದು ಸುಪ್ರೀಂ ಕೋರ್ಟ್, ಬಿಹಾರದಲ್ಲಿ SIR ಪ್ರಕ್ರಿಯೆಯ ನಂತರ ಆಗಸ್ಟ್ 1ರಂದು ಕರಡು ಮತದಾರರ ಪಟ್ಟಿ ಪ್ರಕಟಿಸುವುದನ್ನು ತಡೆಯಲು ನಿರಾಕರಿಸಿತ್ತು.
PublicNext
27/05/2026 12:04 pm