ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಒಂದೊಂದಾಗಿ ಇತಿಹಾಸದ ಪುಟ ಸೇರುತ್ತಿರುವ ಆತಂಕಕಾರಿ ಮತ್ತು ಅಂಶವೊಂದು ಬೆಳಕಿಗೆ ಬಂದಿದೆ.
ಜಿಲ್ಲೆಯ ಗ್ರಾಮೀಣ ಭಾಗದ ಕಣ್ಣುಗಳಂತಿದ್ದ ಸರ್ಕಾರಿ ಶಾಲೆಗಳಿಗೆ ಈಗ ಸಾಲು ಸಾಲಾಗಿ ಬೀಗ ಬೀಳುತ್ತಿದ್ದು, ಈ ವರ್ಷವೊಂದರಲ್ಲೇ ಬರೋಬ್ಬರಿ 70 ರಿಂದ 80 ಶಾಲೆಗಳು ಸಂಪೂರ್ಣವಾಗಿ ಬಾಗಿಲು ಮುಚ್ಚುವ ಆತಂಕ ಎದುರಿಸುತ್ತಿವೆ. ಕೇವಲ ಈ ವರ್ಷದ ಪರಿಸ್ಥಿತಿಯಷ್ಟೇ ಅಲ್ಲ, ಕಳೆದ ಐದು ವರ್ಷಗಳ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 292 ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೆ ಸ್ತಬ್ಧವಾಗಿರುವುದು ಶೈಕ್ಷಣಿಕ ವಲಯದಲ್ಲಿ ತೀವ್ರ ಕಳವಳ ಮೂಡಿಸಿದೆ. ಈ ದುಸ್ಥಿತಿಗೆ ಪ್ರಮುಖ ಕಾರಣ ಪೋಷಕರಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಇಂಗ್ಲಿಷ್ ಮಾಧ್ಯಮದ ವ್ಯಾಮೋಹ. ಖಾಸಗಿ ಶಾಲೆಗಳು ನೀಡುತ್ತಿರುವ ಆಧುನಿಕ ಸೌಲಭ್ಯಗಳು ಮತ್ತು ಪೈಪೋಟಿಗೆ ಸರಿಸಮನಾಗಿ ನಿಲ್ಲಲು ಸರ್ಕಾರಿ ಶಾಲೆಗಳಿಗೆ ಸಾಧ್ಯವಾಗುತ್ತಿಲ್ಲ. ಇದರ ಜೊತೆಗೆ, ಈ ವರ್ಷ ಕರ್ನಾಟಕ ಪಬ್ಲಿಕ್ ಶಾಲೆಗಳ (KPS) ಜೊತೆ ಸಣ್ಣ ಶಾಲೆಗಳನ್ನು ವಿಲೀನಗೊಳಿಸುವ ಸರ್ಕಾರದ ನೀತಿಯೂ ಸಹ ಹಲವು ಶಾಲೆಗಳ ಅಸ್ತಿತ್ವಕ್ಕೆ ಪರೋಕ್ಷವಾಗಿ ಮುಳ್ಳಾಗಿದೆ.
ಸರ್ಕಾರ ಅಕ್ಷರ ದಾಸೋಹ, ಉಚಿತ ಸಮವಸ್ತ್ರ, ಕ್ಷೀರಭಾಗ್ಯದಂತಹ ನಾನಾ ಆಕರ್ಷಕ ಯೋಜನೆಗಳನ್ನು ಜಾರಿಗೆ ತರುತ್ತಿದ್ದರೂ ಸಹ, ದಿನದಿಂದ ದಿನಕ್ಕೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಸಿಯುತ್ತಲೇ ಇದೆ. ಪರಿಣಾಮವಾಗಿ, ಕಾಫಿನಾಡಿನ ಹಳ್ಳಿ ಹಳ್ಳಿಗಳಲ್ಲಿ ಕನ್ನಡದ ಡಿಂಡಿಮ ಬಾರಿಸುತ್ತಿದ್ದ ಜ್ಞಾನ ದೇಗುಲಗಳು ಇಂದು ಕೇವಲ ಕಟ್ಟಡಗಳಾಗಿ ಉಳಿಯುವಂತಾಗಿದ್ದು, ಕನ್ನಡ ಶಾಲೆಗಳ ಉಳಿವಿಗಾಗಿ ಹಮ್ಮಿಕೊಂಡ ಯೋಜನೆಗಳೆಲ್ಲವೂ ಸಂಪೂರ್ಣವಾಗಿ ಹಳಿ ತಪ್ಪುತ್ತಿರುವುದಕ್ಕೆ ಈ ಅಂಕಿ-ಅಂಶಗಳೇ ಸಾಕ್ಷಿಯಾಗಿವೆ.
PublicNext
05/06/2026 02:32 pm
LOADING...