ಚಿಕ್ಕಮಗಳೂರು: ಆಪತ್ಕಾಲದಲ್ಲಿ ರಕ್ತ ಸಿಗದೆ ಪರದಾಡುವ ನೂರಾರು ಜೀವಗಳಿಗೆ ಆಶಾಕಿರಣವಾಗಿ ಮೂಡಿಬಂದಿರುವ ಕಾಫಿನಾಡಿನ ರಕ್ತದಾನಿ ಸಿಲ್ವೇಸ್ಟರ್ ಅವರಿಗೆ ಅಂತರಾಷ್ಟ್ರೀಯ ರಕ್ತದಾನ ದಿನದ ಅಂಗವಾಗಿ ವಿಜಯಪುರದ ಪವಿತ್ರ ಕುಟುಂಬದ ದೇವಾಲಯ ಹಾಗೂ ಹೋಲಿ ಕ್ರಾಸ್ ಆಸ್ಪತ್ರೆಯ ವತಿಯಿಂದ ಆತ್ಮೀಯವಾಗಿ ಗೌರವಿಸಲಾಯಿತು.
ತುರ್ತು ಸಂದರ್ಭ ಎದುರಾದಾಗಲೆಲ್ಲಾ ತಕ್ಷಣವೇ ಸ್ಪಂದಿಸಿ ಇದುವರೆಗೆ ಬರೋಬ್ಬರಿ 49 ಬಾರಿ ರಕ್ತದಾನ ಮಾಡುವ ಮೂಲಕ ಇವರು ಅಪರೂಪದ ಮಾನವೀಯ ಸಾಧನೆ ಮಾಡಿದ್ದಾರೆ. ಕೇವಲ ಚಿಕ್ಕಮಗಳೂರಿಗೆ ಮಾತ್ರ ಸೀಮಿತವಾಗದೆ ಮಂಗಳೂರು, ಬೆಂಗಳೂರು, ಶಿವಮೊಗ್ಗ ಸೇರಿದಂತೆ ಹೊರ ಜಿಲ್ಲೆಗಳಿಗೂ ಖುದ್ದಾಗಿ ಧಾವಿಸಿ ತುರ್ತು ರಕ್ತದಾನ ಮಾಡಿ ಅನೇಕರ ಪ್ರಾಣ ಉಳಿಸಿದ ಹೆಗ್ಗಳಿಕೆ ಇವರದ್ದಾಗಿದೆ.
ಯಾವಾಗಲೂ ಎಮರ್ಜೆನ್ಸಿ ಬ್ಲಡ್ ನೀಡಲು ಸದಾ ಸಿದ್ಧರಿರುವ ಸಿಲ್ವೇಸ್ಟರ್ ಅವರು ಕೇವಲ ಸ್ವತಃ ರಕ್ತ ನೀಡುವುದಷ್ಟೇ ಅಲ್ಲದೆ, ತಮ್ಮ ವಾಟ್ಸಪ್ ಗ್ರೂಪ್‌ಗಳ ಮೂಲಕ ಪ್ರತಿ ತಿಂಗಳು ವಿವಿಧ ಗುಂಪಿನ 50 ರಿಂದ 60 ಯೂನಿಟ್ ರಕ್ತವನ್ನು ಅಗತ್ಯವಿರುವ ರೋಗಿಗಳಿಗೆ ಸಕಾಲದಲ್ಲಿ ವ್ಯವಸ್ಥೆ ಮಾಡಿಕೊಡುತ್ತಿದ್ದಾರೆ.
ಇಂದಿನ ದಿನಗಳಲ್ಲಿ ಸಣ್ಣಪುಟ್ಟ ಪ್ರಚಾರಕ್ಕಾಗಿ ಓಡುವವರ ಮಧ್ಯೆ, ಯಾವುದೇ ಪ್ರಚಾರದ ಹಪಾಹಪಿಯಿಲ್ಲದೆ ಹಗಲಿರುಳು ನಿಸ್ವಾರ್ಥವಾಗಿ ಜೀವ ಉಳಿಸುವ ಮಹತ್ಕಾರ್ಯದಲ್ಲಿ ತೊಡಗಿರುವ ಸಿಲ್ವೇಸ್ಟರ್ ಅವರ ಈ ಸೇವೆ ಇಡೀ ಸಮಾಜಕ್ಕೆ ಅತ್ಯಂತ ಪ್ರೇರಣಾದಾಯಕವಾಗಿದೆ.
Kshetra Samachara
15/06/2026 09:53 pm
LOADING...