ಚಿಕ್ಕಮಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ವಿರುದ್ಧ ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿ.ಟಿ. ರವಿ ಅವರ ಇತ್ತೀಚಿನ ಸಾರ್ವಜನಿಕ ನಡವಳಿಕೆ ಹಾಗೂ ವಿವಾದಾತ್ಮಕ ಹೇಳಿಕೆಗಳನ್ನು ಖಂಡಿಸಿರುವ ಅವರು, ಈ ನಡವಳಿಕೆಗಾಗಿ ರವಿಯವರು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಹಿಂದೆ 'ಸಿದ್ದರಾಮುಲ್ಲಾಖಾನ್' ಹೇಳಿಕೆ ನೀಡಿ ಮೂಲೆ ಸೇರಿದ್ದ ಸಿ.ಟಿ. ರವಿ ಅವರು ಈಗಲಾದರೂ ತಮ್ಮ ನಡವಳಿಕೆ ತಿದ್ದಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಶೋಷಿತ ವರ್ಗದ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಸಂವಿಧಾನದ ಸಾರ್ವಭೌಮತ್ವದ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಆಡಿರುವ ಮಾತುಗಳು ಸಂಪೂರ್ಣ ಸತ್ಯ ಎಂದಿರುವ ರವೀಶ್, ದಶಕಗಳ ಕಾಲ ತನ್ನ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸದ ಆರ್‌ಎಸ್‌ಎಸ್ ಸಂಸ್ಥೆಯನ್ನು ನೋಂದಣಿ ಮಾಡಲು ಹೇಳಿರುವುದರಲ್ಲಿ ಅರ್ಥವಿದೆ ಎಂದಿದ್ದಾರೆ. ಅಲ್ಲದೆ, ನೈತಿಕತೆ ಇದ್ದರೆ ಆರ್‌ಎಸ್‌ಎಸ್ ತನ್ನ ಗುರುದಕ್ಷಿಣೆಯ ಲೆಕ್ಕ ಒಪ್ಪಿಸಿ ಉತ್ತರದಾಯಿತ್ವ ತೋರಿಸಲಿ ಎಂದು ಸವಾಲು ಹಾಕಿದ್ದಾರೆ. ದೇಶದಲ್ಲಿ ಸಂವಿಧಾನದತ್ತ ಜನಪರ ಸರ್ಕಾರ ಕಾಣುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧವೂ ಅವರು ಇದೇ ವೇಳೆ ಆಕ್ರೋಶ ಹೊರಹಾಕಿದ್ದಾರೆ.
ದೇಶದ ಪ್ರಮುಖ ವಿದ್ಯಮಾನಗಳನ್ನು ಪ್ರಸ್ತಾಪಿಸಿದ ಅವರು, 'ನೀಟ್' ಪರೀಕ್ಷೆಯ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ದೂರಿದ್ದಾರೆ. ಈ ಹಿಂದೆ ರಫೇಲ್ ಫೈಲ್‌ಗಳು ನಾಪತ್ತೆಯಾದ ಮಾದರಿಯಲ್ಲೇ ಈಗ ಶಿಕ್ಷಣ ಸಚಿವಾಲಯದ ಫೈಲ್‌ಗಳಿಗೂ ಬೆಂಕಿ ಬಿದ್ದಿದೆ ಹಾಗೂ ಪಶ್ಚಿಮ ಬಂಗಾಳದ 4000 ಇ.ವಿ.ಎಂ.ಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇಷ್ಟೆಲ್ಲಾ ಅವಾಂತರಗಳು ಸಂಭವಿಸುತ್ತಿದ್ದರೂ ಬಿಜೆಪಿ ನಾಯಕರು ಈ ಘಟನೆಗಳನ್ನು ಖಂಡಿಸದೆ ಮೌನಕ್ಕೆ ಶರಣಾಗಿರುವುದು ಅವರ ಕೆಟ್ಟ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ತೀವ್ರವಾಗಿ ಟೀಕಿಸಿದ್ದಾರೆ.
PublicNext
15/06/2026 08:33 pm
LOADING...