ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಶತಮಾನದ ಹೊಸ್ತಿಲಲ್ಲಿರುವ ಮರ್ಲೆ ಸರ್ಕಾರಿ ಶಾಲೆಗೆ ಜೀವಕಳೆ: ಎಲ್.ಕೆ.ಜಿ, ಯು.ಕೆ.ಜಿ ತರಗತಿಗಳು ಆರಂಭ

ಚಿಕ್ಕಮಗಳೂರು: ಶತಮಾನದ ಹೊಸ್ತಿಲಲ್ಲಿರುವ ಮರ್ಲೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರದ ವತಿಯಿಂದ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳನ್ನು ಅಧಿಕೃತವಾಗಿ ಪ್ರಾರಂಭಿಸಲಾಗಿದೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ಬಲವರ್ಧನೆಗೆ ಪೂರಕವಾಗಿ ಆರಂಭವಾದ ಈ ಹೊಸ ತರಗತಿಗಳ ಉದ್ಘಾಟನಾ ಸಮಾರಂಭವು ಯಶಸ್ವಿಯಾಗಿ ನೆರವೇರಿತು. ಕಾಳಿಕಾಂಬ ಟ್ರಸ್ಟ್ ಅಧ್ಯಕ್ಷ ನಾಗೇಶ್ ಉಪಾಧ್ಯಕ್ಷ ಹಾಲಪ್ಪ ಶೆಟ್ಟಿ ಕಾರ್ಯಕ್ರಮವನ್ನು ನೆರವೇರಿಸಿದರು. ಹೊಸದಾಗಿ ದಾಖಲಾದ 15 ಪುಟಾಣಿ ಮಕ್ಕಳಿಗೆ ಆರಂಭದಲ್ಲೇ ಉತ್ತಮ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾಳಿಕಾಂಬ ಟ್ರಸ್ಟ್ ಕೊಡುಗೆ ನೀಡಿದೆ. ಟ್ರಸ್ಟ್ ವತಿಯಿಂದ ಪ್ರತಿಯೊಂದು ಮಗುವಿಗೂ ಉಚಿತ ಪುಸ್ತಕ ಹಾಗೂ ಅಗತ್ಯ ಲೇಖನ ಸಾಮಗ್ರಿಗಳನ್ನು ವಿತರಿಸಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಆಸರೆಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ ಅವರು ಶಾಲೆಯ ಭವ್ಯ ಇತಿಹಾಸವನ್ನು ಸ್ಮರಿಸಿದರು. ಈ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು ಇಂದು ದೇಶದ ವಿವಿಧೆಡೆ ನ್ಯಾಯಾಧೀಶರು, ಡಿವೈಎಸ್ಪಿ, ತಹಸೀಲ್ದಾರ್, ಇಂಜಿನಿಯರ್, ವಿಜ್ಞಾನಿಗಳು, ಶಾಸಕರು, ಪ್ರಗತಿಪರ ರೈತರು ಹಾಗೂ ಉದ್ಯಮಿಗಳಾಗಿ ಉನ್ನತ ಹುದ್ದೆಗಳಲ್ಲಿದ್ದಾರೆ. ಇನ್ನು ನಾಲ್ಕೇ ವರ್ಷಗಳಲ್ಲಿ ಶತಮಾನೋತ್ಸವ (100 ವರ್ಷ) ಆಚರಿಸಲಿರುವ ಈ ಐತಿಹಾಸಿಕ ಶಾಲೆ ಇಂದು ಮಕ್ಕಳ ಕೊರತೆಯಿಂದ ಮುಚ್ಚುವ ಭೀತಿಯಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

​ಶಾಲೆ ಉಳಿಸಲು ಗ್ರಾಮಸ್ಥರಿಗೆ ಕರೆ ಶಾಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕೇವಲ ಸರ್ಕಾರದಷ್ಟೇ ಅಲ್ಲ, ಇಡೀ ಗ್ರಾಮಸ್ಥರು ಮತ್ತು ಶಿಕ್ಷಕರ ಮೇಲಿದೆ ಎಂದು ಮರ್ಲೆ ಅಣ್ಣಯ್ಯ ನುಡಿದರು. ಸರ್ಕಾರ ಗ್ರಾಮೀಣ ಮಕ್ಕಳ ಹಿತದೃಷ್ಟಿಯಿಂದ ಎಲ್.ಕೆ.ಜಿ ವಿಭಾಗವನ್ನು ಆರಂಭಿಸಿದ್ದು, ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ತಮ್ಮ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಈ ಶಾಲೆಗೆ ಸೇರಿಸಬೇಕು. ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಈ ಐತಿಹಾಸಿಕ ಶಾಲೆಯ ಅಸ್ತಿತ್ವವನ್ನು ಕಾಪಾಡಬೇಕು ಎಂದು ಅವರು ಕರೆ ನೀಡಿದರು.

Edited By : PublicNext Desk
PublicNext

PublicNext

15/06/2026 09:10 pm

Cinque Terre

2.47 K

Cinque Terre

0

ಸಂಬಂಧಿತ ಸುದ್ದಿ