ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಕಾಫಿನಾಡ ಆಯುಷ್ಮಾನ್ ಕೇಂದ್ರಗಳಿಗೆ ಗ್ರಹಣ - ಕಚ್ಚಾವಸ್ತು ಕೊರತೆ, ಬೆಲೆ ಏರಿಕೆಗೆ ಬೆದರಿದ ಗುತ್ತಿಗೆದಾರರು!

ಚಿಕ್ಕಮಗಳೂರು: ಕಾಫಿನಾಡಿನ ಗ್ರಾಮೀಣ ಭಾಗದ ಜನರಿಗೆ ಮನೆ ಬಾಗಿಲಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವ ಸರ್ಕಾರದ ಮಹತ್ವಾಕಾಂಕ್ಷಿ ಆಯುಷ್ಮಾನ್ ಆರೋಗ್ಯ ಕೇಂದ್ರಗಳ ನಿರ್ಮಾಣ ಯೋಜನೆಗೆ ಈಗ ತಾಂತ್ರಿಕ ಹಾಗೂ ಆರ್ಥಿಕ ಸಂಕಷ್ಟದ ಗ್ರಹಣ ಹಿಡಿದಿದೆ.

ಜಾಗತಿಕ ಯುದ್ಧಗಳ ಪರಿಣಾಮವಾಗಿ ನಿರ್ಮಾಣ ಸಾಮಗ್ರಿಗಳ ಹಾಗೂ ಕಚ್ಚಾವಸ್ತುಗಳ ಬೆಲೆ ಗಗನಕ್ಕೇರಿದ್ದು, ಸ್ಥಳೀಯ ಸಂಪನ್ಮೂಲಗಳ ಅಭಾವವೂ ಸೃಷ್ಟಿಯಾಗಿರುವುದರಿಂದ ಜಿಲ್ಲೆಯಾದ್ಯಂತ ನೂತನ ಕೇಂದ್ರಗಳ ಕಾಮಗಾರಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ.

ಇದು ಜಿಲ್ಲೆಯ ಗ್ರಾಮೀಣ ಆರೋಗ್ಯ ಸೇವೆಗಳ ವಿಸ್ತರಣೆಗೆ ದೊಡ್ಡ ಹೊಡೆತ ನೀಡಿದೆ. ಪ್ರಸ್ತುತ ಜಿಲ್ಲೆಯಲ್ಲಿರುವ 273 ಆಯುಷ್ಮಾನ್ ಕೇಂದ್ರಗಳ ಪೈಕಿ 121 ಕೇಂದ್ರಗಳು ಇಂದಿಗೂ ಸ್ವಂತ ಸೂರಿಲ್ಲದೆ ಬಾಡಿಗೆ ಕಟ್ಟಡಗಳಲ್ಲೇ ಕಾರ್ಯನಿರ್ವಹಿಸುತ್ತಿವೆ.

ಹೊಸ ಕಟ್ಟಡಗಳ ನಿರ್ಮಾಣಕ್ಕಾಗಿ ಜಿಲ್ಲೆಯ 48 ಕಡೆಗಳಲ್ಲಿ ಸೂಕ್ತ ಜಾಗವನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಆದರೆ, ಈಗಾಗಲೇ ಅನುಮೋದನೆ ಪಡೆದುಕೊಂಡಿರುವ 25 ಕೇಂದ್ರಗಳಲ್ಲಿ ಬಹುತೇಕ ಕಡೆ ಕಾಮಗಾರಿಗಳು ಆರಂಭವಾಗಲೇ ಇಲ್ಲ. ಇದಕ್ಕೆ ಮುಖ್ಯ ಕಾರಣ, ಸರ್ಕಾರ ಪ್ರತಿ ಕೇಂದ್ರದ ನಿರ್ಮಾಣಕ್ಕೆ 65 ಲಕ್ಷ ರೂಪಾಯಿ ಅನುದಾನ ಘೋಷಿಸಿದ್ದರೂ, ಇಂದಿನ ಮಾರುಕಟ್ಟೆ ದರಕ್ಕೆ ಹೋಲಿಸಿದರೆ ಎರಡು ಅಂತಸ್ತಿನ ಸುಸಜ್ಜಿತ ಕಟ್ಟಡ ನಿರ್ಮಿಸಲು ಈ ಮೊತ್ತ ತೀರಾ ಕಡಿಮೆ ಎನ್ನುವುದು ತಜ್ಞರ ಹಾಗೂ ಗುತ್ತಿಗೆದಾರರ ವಾದವಾಗಿದೆ.

ಈ ಆರ್ಥಿಕ ನಷ್ಟದ ಭೀತಿಯಿಂದಾಗಿ ಜಿಲ್ಲೆಯಲ್ಲಿ ಆಯುಷ್ಮಾನ್ ಕೇಂದ್ರಗಳ ನಿರ್ಮಾಣಕ್ಕಾಗಿ ಬರೋಬ್ಬರಿ 10 ಬಾರಿ ಟೆಂಡರ್ ಕರೆದರೂ ಯಾವುದೇ ಗುತ್ತಿಗೆದಾರರು ಮುಂದೆ ಬರುತ್ತಿಲ್ಲ. ಕೆಲವು ಗುತ್ತಿಗೆದಾರರು ಸ್ಥಳ ಪರಿಶೀಲನೆ ನಡೆಸಿದ ಬಳಿಕ ಕಾಮಗಾರಿ ವಹಿಸಿಕೊಳ್ಳಲು ಸ್ಪಷ್ಟವಾಗಿ ನಿರಾಕರಿಸುತ್ತಿದ್ದಾರೆ.

ಹೊರ ಜಿಲ್ಲೆಗಳಿಂದ ಬರುವ ಗುತ್ತಿಗೆದಾರರಿಗೆ ಇಲ್ಲಿ ಕಾರ್ಮಿಕರ ಮತ್ತು ಸ್ಥಳೀಯ ಸಂಪನ್ಮೂಲಗಳ ಕೊರತೆಯ ಆತಂಕ ಎದುರಾಗಿದೆ. ವೆಚ್ಚ ಏರಿಕೆಯಿಂದಾಗಿ ಮೂಲಸೌಕರ್ಯ ಅಭಿವೃದ್ಧಿಗೆ ದೊಡ್ಡ ಅಡ್ಡಿ ಉಂಟಾಗಿದ್ದು, ಸರ್ಕಾರದ ಕನಸಿನ ಯೋಜನೆ ನೆನೆಗುದಿಗೆ ಬಿದ್ದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.

Edited By : Somashekar
PublicNext

PublicNext

13/06/2026 10:45 am

Cinque Terre

9.64 K

Cinque Terre

0

ಸಂಬಂಧಿತ ಸುದ್ದಿ