ಚಿಕ್ಕಮಗಳೂರು: ಹಠಾತ್ ಹೃದಯಾಘಾತ, ಭೀಕರ ರಸ್ತೆ ಅಪಘಾತ, ಇಲ್ಲವೇ ಪಾರ್ಶ್ವವಾಯು ಇಂತಹ ತುರ್ತು ಸಂದರ್ಭಗಳಲ್ಲಿ ರೋಗಿಯ ಪ್ರಾಣ ಉಳಿಸುವುದು ಆಸ್ಪತ್ರೆಯ ಐಸಿಯು ಬೆಡ್ ಮಾತ್ರವಲ್ಲ, ಬದಲಿಗೆ ರೋಗಿಗೆ ಕಾಯಿಲೆ ಕಾಣಿಸಿಕೊಂಡ ಮೊದಲ ಒಂದು ಗಂಟೆ ವೈದ್ಯಕೀಯ ಲೋಕದಲ್ಲಿ 'ಗೋಲ್ಡನ್ ಅವರ್' ಎಂದು ಕರೆಯಲಾಗುವ ಈ ಅತ್ಯಂತ ನಿರ್ಣಾಯಕ ಸಮಯದಲ್ಲಿ ಸಿಗುವ ಚಿಕಿತ್ಸೆ ರೋಗಿಯನ್ನು ಸಾವಿನ ದವಡೆಯಿಂದ ಪಾರು ಮಾಡಬಲ್ಲದು ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ. ಸುನೀಲ್ ಕಾರಂತ್ ತಿಳಿಸಿದ್ದಾರೆ.
ಚಿಕ್ಕಮಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತುರ್ತು ನಿಗಾ ವೈದ್ಯಕೀಯ ಕ್ಷೇತ್ರದ ಇತ್ತೀಚಿನ ವಿಕಸನದ ಕುರಿತು ಅವರು ಹಲವು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡರು.
ಇಂದಿನ ದಿನಗಳಲ್ಲಿ ಕ್ರಿಟಿಕಲ್ ಕೇರ್ ಎಂದರೆ ಕೇವಲ ರೋಗಿಯನ್ನು ತಂದು ಐಸಿಯು ಒಳಗೆ ದಾಖಲಿಸಿ ಚಿಕಿತ್ಸೆ ನೀಡುವುದಷ್ಟೇ ಅಲ್ಲ. ಘಟನೆ ಸಂಭವಿಸಿದ ತಕ್ಷಣ, ಇದ್ದ ಸ್ಥಳದಿಂದಲೇ ಚಿಕಿತ್ಸೆ ಆರಂಭವಾಗಬೇಕು. ಯಾವುದೇ ವಿಳಂಬವಿಲ್ಲದೆ ಸರಿಯಾದ ಸಮಯದಲ್ಲಿ ಸೂಕ್ತ ವೈದ್ಯಕೀಯ ಕೇಂದ್ರವನ್ನು ತಲುಪುವುದು ಮತ್ತು ರೋಗಿಯ ಸ್ಥಿತಿಯನ್ನು ಮೊದಲು ಸ್ಥಿರಗೊಳಿಸುವುದು ಇಂದಿನ ತುರ್ತು ಚಿಕಿತ್ಸೆಯ ಪ್ರಮುಖ ಮಂತ್ರವಾಗಿದೆ ಎಂದು ಡಾ. ಕಾರಂತ್ ತಿಳಿಸಿದರು.
ಚಿಕ್ಕಮಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಉತ್ತಮ ಆರೋಗ್ಯ ಕೇಂದ್ರಗಳಿದ್ದರೂ, ಜಟಿಲವಾದ ಉಷ್ಣವಲಯದ ಸೋಂಕುಗಳು, ನರರೋಗ ತುರ್ತು ಪರಿಸ್ಥಿತಿಗಳು ಮತ್ತು ಬಹು-ಅಂಗಾಂಗಗಳ ಸಮಸ್ಯೆಗಳು ಎದುರಾದಾಗ ಸುಧಾರಿತ 'ಕ್ವಾಟರ್ನರಿ-ಮಟ್ಟದ' ತುರ್ತು ನಿಗಾ ಚಿಕಿತ್ಸೆಯ ಅಗತ್ಯವಿರುತ್ತದೆ. ಇಂತಹ ಗಂಭೀರ ಪರಿಸ್ಥಿತಿಗಳಲ್ಲಿ ಆಸ್ಪತ್ರೆಗೆ ದಾಖಲಾಗುವುದು ತಡವಾದರೆ, ಚಿಕಿತ್ಸೆ ನೀಡುವುದು ಮತ್ತಷ್ಟು ಸವಾಲಾಗಲಿದ್ದು, ಚೇತರಿಕೆಯ ಅವಧಿಯೂ ಸುದೀರ್ಘವಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
PublicNext
15/06/2026 07:39 pm
LOADING...