ಚಿಕ್ಕಮಗಳೂರು: ಸಾರ್ವಜನಿಕ ರಸ್ತೆ ಬದಿಯಲ್ಲಿ ಮೂಟೆ ತುಂಬಿದ ಗೋಮಾಂಸ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಮಾಂಸ ಇದ್ದ ಚೀಲವನ್ನು ವಶಪಡಿಸಿಕೊಂಡಿದ್ದಾರೆ. ನಗರದ ಮಧುವನ ಲೇಔಟ್‌ನಿಂದ ಅಯ್ಯಪ್ಪ ನಗರದ ಕಡೆಗೆ ಹೋಗುವ ರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿದ್ದ ಮಾಂಸದ ತುಂಡುಗಳನ್ನು ಬೀದಿ ನಾಯಿಗಳು ಎಳೆದಾಡುತ್ತಿರುವುದನ್ನು ನಗರ ಪೊಲೀಸ್ ಠಾಣೆಯ ಪಿಎಸ್ಐ ಸುನೀತಾ ಕೆ.ಆರ್. ಅವರು ತಮ್ಮ ಸಿಬ್ಬಂದಿಯೊಂದಿಗೆ ಗಸ್ತಿನಲ್ಲಿದ್ದಾಗ ಗಮನಿಸಿದ್ದಾರೆ.
ಇದನ್ನು ಪರಿಶೀಲಿಸಿದಾಗ, ಯಾರೋ ಅಪರಿಚಿತ ಕಿಡಿಗೇಡಿಗಳು ಪ್ರಾಣಿಯೊಂದನ್ನು ಕೊಯ್ದು ಅದರ ಮೂಳೆ ಮತ್ತು ಮಾಂಸದ ತುಂಡುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ರಸ್ತೆ ಬದಿಯಲ್ಲಿ ಎಸೆದು ಹೋಗಿರುವುದು ಪತ್ತೆಯಾಗಿದೆ. ಈ ಮಾಂಸದ ತುಂಡುಗಳು ಮತ್ತು ಮೂಳೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇವು ಮೇಲ್ನೋಟಕ್ಕೆ ಗೋಮಾಂಸ ಎಂದು ದೃಢಪಟ್ಟಿದೆ. ಮುಂದಿನ ಕಾನೂನು ಕ್ರಮ ಜರುಗಿಸುವ ಸಲುವಾಗಿ ಪೊಲೀಸರು ಸುಮಾರು 30 ಕೆ.ಜಿ ತೂಕದ ಗೋಮಾಂಸವನ್ನು ಸ್ಥಳದಲ್ಲೇ ಜಪ್ತಿ ಮಾಡಿದ್ದು, ಸಾರ್ವಜನಿಕ ಸ್ಥಳದಲ್ಲಿ ಇಂತಹ ಕೃತ್ಯ ಎಸಗಿದ ಕಿಡಿಗೇಡಿಗಳ ಪತ್ತೆಗಾಗಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
Kshetra Samachara
13/06/2026 09:31 pm
LOADING...