ತಿರುವನಂತಪುರಂ: ಆರ್‌ಎಸ್‌ಎಸ್ ನೋಂದಣಿ, ದೇಣಿಗೆ, ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಗೃಹಸಚಿವ ಪ್ರಿಯಾಂಕ್ ಖರ್ಗೆ ಬರೆದಿರುವ ಪತ್ರಕ್ಕೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಕೇರಳದ ತ್ರಿಶೂರ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋಹನ್ ಭಾಗವತ್, ಪ್ರಿಯಾಂಕ್ ಖರ್ಗೆ ಬರೆದಿರುವ ಪತ್ರವನ್ನು ರಾಜಕೀಯ ಗಿಮಿಕ್ ಎಂದು ಕುಟುಕಿದ್ದಾರೆ. ಜೊತೆಗೆ ಆರ್‌ಎಸ್‌ಎಸ್ ರಹಸ್ಯವಾಗಿಲ್ಲ, ನಾವು ತೆರೆದ ಬಯಲಿನಲ್ಲಿ ಕೆಲಸ ಮಾಡುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.
"ನಾವು ಯಾವುದೇ ರಹಸ್ಯ ಚಟುವಟಿಕೆಗಳನ್ನು ನಡೆಸುತ್ತಿಲ್ಲ. ನಮ್ಮ ಶಾಖೆಗಳು ಮತ್ತು ಕಾರ್ಯಕ್ರಮಗಳು ತೆರೆದ ಮೈದಾನಗಳಲ್ಲಿ ನಡೆಯುತ್ತವೆ. ಜನರನ್ನು ಕರೆದು ಸಂಘದ ಬಗ್ಗೆ ಅವರಿಗೆ ಮುಕ್ತವಾಗಿ ತಿಳಿಸುತ್ತೇವೆ. ನಮ್ಮ ಕಾರ್ಯಕರ್ತರು ಪ್ರತಿದಿನ ಜನರ ನಡುವೆ ಇರುತ್ತಾರೆ, ಜನರು ನಮ್ಮನ್ನು ದಿನನಿತ್ಯ ನೋಡುತ್ತಾರೆ. ಹೀಗಿರುವಾಗ ನಾವು ರಹಸ್ಯವಾಗಿ ಕೆಲಸ ಮಾಡುತ್ತಿದ್ದೇವೆ ಎಂಬುದು ಸುಳ್ಳು" ಎಂದು ಭಾಗವತ್ ಸ್ಪಷ್ಟಪಡಿಸಿದರು.
'ಇಂತಹ ಪತ್ರಗಳಿಗೆ ಪ್ರತಿಕ್ರಿಯೆ ನೀಡುವ ಅಗತ್ಯವೇ ಇಲ್ಲ. ಇದು ಕೇವಲ ರಾಜಕೀಯವಷ್ಟೇ. ಸಂಘದ ವಿರುದ್ಧ ಇಂತಹ ಗಿಮಿಕ್‌ಗಳನ್ನು ಮಾಡಲಾಗುತ್ತಿದೆ. ನಾವು ಇದಕ್ಕೆಲ್ಲಾ ಒಗ್ಗಿಕೊಂಡಿದ್ದೇವೆ. ಕಳೆದ ಹಲವು ವರ್ಷಗಳಿಂದ ಇಂತಹ ಆರೋಪಗಳನ್ನು ನಾವು ಎದುರಿಸಿಕೊಂಡು ಬಂದಿದ್ದೇವೆ. ನಮ್ಮ ಕೆಲಸಗಳಿಗೆ ಅಡ್ಡಿಪಡಿಸಲು ಮತ್ತು ಜನರ ಮನಸ್ಸಿನಲ್ಲಿ ನಮ್ಮ ಬಗ್ಗೆ ಅನುಮಾನ ಮೂಡಿಸಲು ಈ ರೀತಿ ಮಾಡಲಾಗುತ್ತಿದೆ, ಆದರೆ ಅದು ಸಾಧ್ಯವಿಲ್ಲ" ಎಂದು ಸರ್ಕಾರದ ನಡೆಯನ್ನು ತಳ್ಳಿಹಾಕಿದರು.
ನೋಂದಣಿ ಅಗತ್ಯವಿಲ್ಲ
"ನೋಂದಣಿಯಾಗದೆ ಪ್ರಪಂಚದಲ್ಲಿ ಅನೇಕ ವಿಷಯಗಳು ನಡೆಯುತ್ತಿವೆ. ಉದಾಹರಣೆಗೆ, 'ಹಿಂದೂ ಧರ್ಮ' ಎಲ್ಲಾದರೂ ನೋಂದಣಿಯಾಗಿದೆಯೇ? ಸರ್ಕಾರದಿಂದ ನಿಧಿ ಪಡೆಯಲು ಬಯಸುವವರಿಗೆ ಮಾತ್ರ ನೋಂದಣಿಯ ಅಗತ್ಯವಿರುತ್ತದೆ ವಿನಃ ನಮಗಲ್ಲ" ಎಂದು ಅವರು ಪ್ರತಿವಾದ ಮಂಡಿಸಿದರು.
ಆರ್‌ಎಸ್‌ಎಸ್ ಇತಿಹಾಸ ಮತ್ತು ಸಂವಿಧಾನ
ಆರ್‌ಎಸ್‌ಎಸ್ ಬ್ರಿಟಿಷರ ಕಾಲದಲ್ಲೇ ಜನರ ಇಚ್ಛೆಯಿಂದ ಪ್ರಾರಂಭವಾದ ಸಂಸ್ಥೆ ಎಂದು ತಿಳಿಸಿದ ಭಾಗವತ್, "ಕಳೆದ 100 ವರ್ಷಗಳಿಂದ ಯಾರೂ ನಮಗೆ ನೋಂದಣಿ ಮಾಡಿಕೊಳ್ಳಲು ಹೇಳಿಲ್ಲ. ನಮ್ಮದೇ ಆದ ಲಿಖಿತ ಸಂವಿಧಾನ ಇದೆ. ಅದನ್ನು 1950ರ ದಶಕದಲ್ಲೇ ನಾವು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಆಗ ಸರ್ಕಾರ ಮೊದಲು ನೋಂದಣಿ ಮಾಡಿ ಆಮೇಲೆ ಸಂವಿಧಾನ ಒಪ್ಪಿಕೊಳ್ಳುತ್ತೇವೆ ಎಂದು ಹೇಳಿರಲಿಲ್ಲ" ಎಂದು ಸ್ಮರಿಸಿದರು.
"ಸರ್ಕಾರಕ್ಕೆ ಆರ್‌ಎಸ್‌ಎಸ್ ಬಗ್ಗೆ ಗೊತ್ತಿಲ್ಲ ಎಂದೇನಿಲ್ಲ. ಈ ಹಿಂದೆ ನಮ್ಮ ಮೇಲೆ ಎರಡು ಬಾರಿ ನಿಷೇಧ ಹೇರಲಾಗಿತ್ತು. ನ್ಯಾಯಾಲಯದ ಆದೇಶ ಮತ್ತು ಸತ್ಯಾಗ್ರಹಗಳ ಮೂಲಕ ಆ ನಿಷೇಧವನ್ನು ವಾಪಸ್ ಪಡೆಯಲಾಯಿತು. ನಮ್ಮನ್ನು ನಿಷೇಧಿಸಿದ್ದರು ಎಂದರೆ, ಆರ್‌ಎಸ್‌ಎಸ್ ಎಂಬ ಸಂಸ್ಥೆ ಇದೆ ಎಂದು ಸರ್ಕಾರವೇ ಗುರುತಿಸಿದೆ ಎಂದರ್ಥ" ಎಂದು ಭಾಗವತ್ ಸರ್ಕಾರದ ಹಿಂದಿನ ನಿಲುವುಗಳನ್ನೇ ಉಲ್ಲೇಖಿಸಿ ತಿರುಗೇಟು ನೀಡಿದರು.
PublicNext
15/06/2026 07:35 pm