ಚಳ್ಳಕೆರೆ: ಇ-ಶ್ರಮ ಕಾರ್ಡ್ ಮಾಡಿಕೊಡುವುದಾಗಿ ಹಾಗೂ ಪ್ರಧಾನಿ ಯೋಜನೆಯಡಿ ₹2,000 ಹಣ ದೊರೆಯುತ್ತದೆ ಎಂದು ನಂಬಿಸಿ ಮಹಿಳೆಯರ ಆಧಾರ್ ಕಾರ್ಡ್ ವಿವರಗಳು ಮತ್ತು ಒಟಿಪಿ ಪಡೆದು, ಅವರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದಿರುವ ಗಂಭೀರ ವಂಚನೆ ಪ್ರಕರಣ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಯಲಗಟ್ಟೆ ಗೊಲ್ಲರಹಟ್ಟಿಯಲ್ಲಿ ಬೆಳಕಿಗೆ ಬಂದಿದೆ.
ಗ್ರಾಮದ ಐದು ಮಹಿಳೆಯರಿಗೆ ಖಾಸಗಿ ಕಂಪನಿಯ ಇಬ್ಬರು ಸಿಬ್ಬಂದಿ ಇ-ಶ್ರಮ ಕಾರ್ಡ್ ಮಾಡಿಕೊಡುತ್ತೇವೆ ಎಂದು ಹೇಳಿ ಆಧಾರ್ ಕಾರ್ಡ್ ಹಾಗೂ ಮೊಬೈಲ್‌ಗೆ ಬಂದ ಒಟಿಪಿ ಸಂಖ್ಯೆಯನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಮಹಿಳೆಯರಿಗೆ ತಿಳಿಯದಂತೆ ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆ ಹಾಗೂ ಎಟಿಎಂ ಸೌಲಭ್ಯ ಪಡೆದು, ತಲಾ ₹75 ಸಾವಿರದಂತೆ ಒಟ್ಟು ₹3.75 ಲಕ್ಷ ಸಾಲ ಮಂಜೂರು ಮಾಡಿಸಿಕೊಂಡಿರುವ ಆರೋಪ ಕೇಳಿಬಂದಿದೆ.
ಕೆಲ ದಿನಗಳ ಬಳಿಕ ಖಾಸಗಿ ಕಂಪನಿಯ ವ್ಯವಸ್ಥಾಪಕರು ಸಾಲದ ಪರಿಶೀಲನೆಗಾಗಿ ಗ್ರಾಮಕ್ಕೆ ಬಂದಾಗಲೇ ಮಹಿಳೆಯರಿಗೆ ತಮ್ಮ ಹೆಸರಿನಲ್ಲಿ ಸಾಲ ಪಡೆದಿರುವ ವಿಷಯ ಗೊತ್ತಾಗಿದೆ. "ನಾವು ಯಾವುದೇ ಸಾಲ ಪಡೆದಿಲ್ಲ. ಇ-ಶ್ರಮ ಕಾರ್ಡ್ ಹಾಗೂ ಸರ್ಕಾರದ ಯೋಜನೆಯ ಹಣ ದೊರೆಯುತ್ತದೆ ಎಂದು ನಂಬಿಸಿ ನಮ್ಮ ದಾಖಲೆಗಳು ಮತ್ತು ಒಟಿಪಿ ಪಡೆದುಕೊಂಡಿದ್ದರು," ಎಂದು ವಂಚನೆಗೊಳಗಾದ ಮಹಿಳೆಯರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿರುವ ಮಹಿಳೆಯರು ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ.
PublicNext
19/07/2026 10:14 pm
LOADING...