ಚಿತ್ರದುರ್ಗ: ಹೀಗೆ ಭೀಕರ ಕೊಲೆಯಾಗಿ ಬಿದ್ದಿರುವ ವ್ಯಕ್ತಿಯ ಹೆಸರು ಚಂದ್ರಪ್ಪ (60). ಚಿತ್ರದುರ್ಗ ತಾಲ್ಲೂಕಿನ ಕಲ್ಕುಂಟೆ ಗ್ರಾಮದ ನಿವಾಸಿ. ನಿನ್ನೆ ತನ್ನದೇ ಐದು ಎಕರೆ ಜಮೀನು ಉಳುಮೆಗೆ ಅಂತ ಹೋಗಿದ್ದ. ಇದೇ ವೇಳೆ ಜಮೀನಿಗೆ ಬಂದಿದ್ದ ಮಗ ಪ್ರಸನ್ನ, ಅಪ್ಪನ ಜೊತೆ ಜಗಳ ಶುರು ಮಾಡಿದ್ದ. ಅಪ್ಪನ ಆಸ್ತಿಯಲ್ಲಿ ಹಂಚಿಕೆ ಮಾಡುವಂತೆ ತಂದೆಯ ಮುಂದೆ ಕ್ಯಾತೆ ತೆಗೆದಿದ್ದ. ಇದೇ ವೇಳೆ ಮಾತಿಗೆ ಮಾತು ಬೆಳೆಸಿದ್ದ ಪಾಪಿ ಪುತ್ರ ಪ್ರಸನ್ನ ಏಕಾಏಕಿ ದೊಣ್ಣೆಯಿಂದ ಅಪ್ಪನ ತಲೆಗೆ ಹೊಡೆದಿದ್ದ. ಮಗನ ಏಟು ತಲೆಗೆ ಬೀಳುತ್ತಿದ್ದಂತೆ ಸ್ಥಳದಲ್ಲೇ ಕುಸಿದು ಬಿದ್ದು, ಚಂದ್ರಪ್ಪನ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಇನ್ನೂ ಕೊಲೆ ಆರೋಪಿ ಪ್ರಸನ್ನ ಅಪ್ಪನ ಕೊಂದು ಪೊಲೀಸರ ಮುಂದೆ ಶರಣಾಗಿದ್ದಾನೆ. ಇನ್ನೂ ಕಳೆದ ಎರಡು ಮೂರು ವರ್ಷಗಳಿಂದ ಅಪ್ಪ- ಮಗನ ಜೊತೆ ಐದು ಎಕರೆ ಜಮೀನು ಹಂಚಿಕೆ ವಿಚಾರಕ್ಕೆ ಹಾಗಾಗ ಜಗಳ ನಡೆಯುತ್ತಿತ್ತು. ಇದೇ ಕಾರಣಕ್ಕೆ ಇಬ್ಬರೂ ಕೂಡ ಬಿತ್ತನೆ ಮಾಡದಂತೆ ಪಾಳು ಬಿಟ್ಟಿದ್ದರು. ಆದ್ರೆ ನಿನ್ನೆ ಮತ್ತೆ ಜಮೀನಿಗೆ ಹೊರಟಿದ್ದ ತಂದೆ ಚಂದ್ರಪ್ಪ ಉಳುಮೆ ಮಾಡಲು ತಯಾರಿ ಮಾಡ್ತಿದ್ದ. ಇದೇ ಕಾರಣಕ್ಕೆ ರೊಚ್ಚಿಗೆದ್ದ ಪಾಪಿ ಪುತ್ರ ಪ್ರಸನ್ನ ಏಕಾಏಕಿ ಜಮೀನಿಗೆ ನುಗ್ಗಿ ಅಪ್ಪನನ್ನ ಕೊಂದು ಮುಗಿಸಿದ್ದಾನೆ. ಸದ್ಯ ಆರೋಪಿ ಪ್ರಸನ್ನ ನನ್ನು ಭರಮಸಾಗರ ಠಾಣೆ ಪೊಲೀಸರು ಬಂಧಿಸಿ, ವಿಚಾರಣೆ ಆರಂಭಿಸಿದ್ದಾರೆ.
ಇನ್ನೂ ತನ್ನ ಮಗನಿಂದಲೇ ಅಪ್ಪನ ಕೊಲೆಯಾಗಿದ್ದು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇದೇ ವೇಳೆ ಘಟನಾ ಸ್ಥಳಕ್ಕೆ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ಹಾಗೂ ಸುಕೋ ಟೀಂ ಭೇಟಿ ನೀಡಿ, ಸಾಕ್ಷ್ಯ ಸಂಗ್ರಹಿಸಿದ್ದಾರೆ. ಇತ್ತ ಭರಮಸಾಗರ ಠಾಣೆ ಪೊಲೀಸರು ಕೂಡಾ ಸ್ಥಳಕ್ಕೆ ಆಗಮಿಸಿ ಸ್ಪಾಟ್ ಮಹಜರ್ ಕೂಡಾ ನಡೆಸಿದ್ದು, ಆರೋಪಿ ಪ್ರಸನ್ನನನ್ನು ಜೈಲಿಗಟ್ಟಿದ್ದಾರೆ.
ಒಟ್ಟಾರೇ ತಾನು ಸಾಕಿ ಬೆಳೆಸಿದ್ದ ಮಗನೇ ತನ್ನ ತಂದೆಯನ್ನು ಆಸ್ತಿಗಾಗಿ ಕೊಂದು ಹಾಕಿದ್ದು, ಸಾರ್ವಜನಿಕರ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಇಂಥ ಕೊಲೆಗಡುಕ ಮಗನಿಗೆ ತಕ್ಕ ಶಿಕ್ಷೆಯಾಗಲಿ ಅನ್ನೋದು ಸಂಬಂಧಿಕರ ಒತ್ತಾಯವಾಗಿದೆ.
PublicNext
20/07/2026 05:41 pm
LOADING...