ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಕಲೇಶಪುರ ಅರಣ್ಯದಲ್ಲಿ ಆಫ್‌ರೋಡ್‌ಗೆ ಬ್ರೇಕ್ : ಅನುಮತಿ ಇಲ್ಲದೆ ಬಂದ ಯುವಕರಿಗೆ ವಾರ್ನಿಂಗ್

ಅನುಮತಿಯಿಲ್ಲದೆ ಆಫ್‌ರೋಡ್‌ ಚಟುವಟಿಕೆಗೆ ಯತ್ನ: ಬೆಂಗಳೂರಿನ ಯುವಕರಿಗೆ ಅರಣ್ಯ ಇಲಾಖೆಯಿಂದ ಕಟ್ಟುನಿಟ್ಟಿನ ಎಚ್ಚರಿಕೆ!

ಸಕಲೇಶಪುರ: ಸೂಕ್ತ ಹಾಗೂ ಅಗತ್ಯ ಅನುಮತಿಗಳಿಲ್ಲದೆ ಅರಣ್ಯ ಪ್ರದೇಶದಲ್ಲಿ ಆಫ್‌ರೋಡ್ (Off-road) ಸಾಹಸ ಚಟುವಟಿಕೆಗಳನ್ನು ನಡೆಸಲು ಮುಂದಾಗಿದ್ದ ಬೆಂಗಳೂರು ಮೂಲದ ಯುವಕರ ತಂಡಕ್ಕೆ ಸಕಲೇಶಪುರ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಆರ್‌ಎಫ್‌ಒ (RFO) ಹೇಮಂತ್ ಕುಮಾರ್ ಅವರ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿಗಳಾದ ಮಹದೇವಪ್ಪ, ದೇವೇಂದ್ರ ಹಾಗೂ ಸೋಮಶೇಖರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ, "ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಸಂಚಾರ ಹೆಚ್ಚಿರುವುದರಿಂದ ಆಫ್‌ರೋಡ್ ವಾಹನಗಳ ಶಬ್ದ ಮತ್ತು ಸಂಚಾರದಿಂದ ವನ್ಯಜೀವಿಗಳ ಸಹಜ ವಾಸಸ್ಥಾನಕ್ಕೆ ತೊಂದರೆಯಾಗುತ್ತದೆ.

ಜೊತೆಗೆ ಸೂಕ್ಷ್ಮ ಪರಿಸರಕ್ಕೆ ಹಾನಿಯಾಗುವುದರೊಂದಿಗೆ ಪ್ರವಾಸಿಗರು ಹಾಗೂ ಸಾರ್ವಜನಿಕರ ಸುರಕ್ಷತೆಯ ಮೇಲೂ ದುಷ್ಪರಿಣಾಮ ಬೀರುತ್ತದೆ" ಎಂದು ಅಧಿಕಾರಿಗಳು ಯುವಕರಿಗೆ ಖಡಕ್ ಆಗಿ ತಿಳಿಸಿದರು.

ಅರಣ್ಯ ಪ್ರದೇಶ ಅಥವಾ ಅದರ ಸುತ್ತಮುತ್ತ ಯಾವುದೇ ಆಫ್‌ರೋಡ್ ಚಟುವಟಿಕೆ ನಡೆಸುವ ಮುನ್ನ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಆರ್‌ಟಿಒ (RTO) ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಂದ ಕಡ್ಡಾಯವಾಗಿ ಅಗತ್ಯ ಅನುಮತಿ ಪತ್ರ (NOC) ಮತ್ತು ಪತ್ರಾವಳಿಗಳನ್ನು ಪಡೆದುಕೊಳ್ಳಬೇಕು ಎಂದು ಸೂಚಿಸಿದರು.

ಅರಣ್ಯ ಸಿಬ್ಬಂದಿಯು ಯುವಕರಿಗೆ ಪರಿಸರ ಸಂರಕ್ಷಣೆ ಹಾಗೂ ವನ್ಯಜೀವಿಗಳ ಸುರಕ್ಷತೆಯ ಮಹತ್ವದ ಕುರಿತು ಜಾಗೃತಿ ಮೂಡಿಸಿದರು. ಬಳಿಕ ಯುವಕರ ಬಳಿಯಿದ್ದ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಪರಿಸರ ಮತ್ತು ವನ್ಯಜೀವಿಗಳ ರಕ್ಷಣೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರು ಸಂಪೂರ್ಣ ಸಹಕಾರ ನೀಡಬೇಕೆಂದು ಅರಣ್ಯ ಇಲಾಖೆ ಮನವಿ ಮಾಡಿದೆ.

Edited By :
Kshetra Samachara

Kshetra Samachara

25/07/2026 10:56 am

Cinque Terre

1.26 K

Cinque Terre

0

ಸಂಬಂಧಿತ ಸುದ್ದಿ