ಹಾಸನ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಕಲೇಶಪುರ ಯೋಜನಾ ಕಚೇರಿ ವ್ಯಾಪ್ತಿಯ ಕಸಬಾ ವಲಯದ ದೊಡ್ಡನಗರ ಕಾರ್ಯಕ್ಷೇತ್ರದಲ್ಲಿ ಪರಿಸರ ಸಂರಕ್ಷಣೆಗೆ ಉತ್ತೇಜನ ನೀಡುವ ಉದ್ದೇಶದಿಂದ, ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಹಾಗೂ ಅವುಗಳನ್ನು ವನ್ಯಪ್ರಾಣಿಗಳಿಂದ ರಕ್ಷಿಸಲು ಮುಳ್ಳಿನ ಬೇಲಿ ನಿರ್ಮಿಸುವ ವಿಶೇಷ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ವಿವಿಧ ತಳಿಯ 300 ಹಣ್ಣಿನ ಗಿಡಗಳನ್ನು ಅರಣ್ಯ ಪ್ರದೇಶದಲ್ಲಿ ನೆಡಲಾಗಿದ್ದು, ಗಿಡಗಳಿಗೆ ಪ್ರಾಣಿಗಳಿಂದ ಹಾನಿಯಾಗದಂತೆ ಮುಳ್ಳಿನ ಬೇಲಿ ನಿರ್ಮಿಸಲಾಯಿತು. ಈ ಮೂಲಕ ಕಾಡಿನಲ್ಲಿಯೇ ವನ್ಯಜೀವಿಗಳಿಗೆ ಆಹಾರ ದೊರೆಯುವ ವಾತಾವರಣ ನಿರ್ಮಿಸಿ, ಮನುಷ್ಯ–ವನ್ಯಜೀವಿ ಸಂಘರ್ಷವನ್ನು ತಗ್ಗಿಸುವ ಮೂಲ ಉದ್ದೇಶ ಹೊಂದಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, "ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ನೆಡುವುದರಿಂದ ಕಾಡಿನ ಪ್ರಾಣಿಗಳು ಹಾಗೂ ಪಕ್ಷಿಗಳಿಗೆ ಆಹಾರ ಲಭ್ಯವಾಗುವುದರ ಜೊತೆಗೆ ಪರಿಸರ ಸಮತೋಲನ ಮತ್ತು ಅಂತರ್ಜಲ ವೃದ್ಧಿಗೂ ಸಹಕಾರಿಯಾಗುತ್ತದೆ. ಸಮಾಜಮುಖಿ ಸೇವೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ" ಎಂದು ಶ್ಲಾಘಿಸಿದರು.
ಕ್ಷೇತ್ರ ಯೋಜನಾಧಿಕಾರಿ ರಾಜೇಶ್ ಎಂ. ಹಾಗೂ ವಲಯ ಮೇಲ್ವಿಚಾರಕ ಚಿರಂತ್ ಮಾತನಾಡಿ, "ಲಕ್ಷ ವೃಕ್ಷ ಯೋಜನೆಯಡಿ ಅರಣ್ಯ, ಸರ್ಕಾರಿ ಶಾಲೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವೃಕ್ಷಾರೋಪಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪರಿಸರ ಸಂರಕ್ಷಣೆ, ಜೀವವೈವಿಧ್ಯ ಉಳಿವು ಹಾಗೂ ವನ್ಯಜೀವಿಗಳ ರಕ್ಷಣೆಗೆ ಇಂತಹ ಕಾರ್ಯಕ್ರಮಗಳು ಅತ್ಯಂತ ಮಹತ್ವದ್ದಾಗಿದ್ದು, ಪ್ರಕೃತಿ ಸಮತೋಲನ ಕಾಪಾಡಲು ಪರಿಣಾಮಕಾರಿ ಹೆಜ್ಜೆಯಾಗಲಿವೆ" ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರ ಹಾಗೂ ಸಮಾಜಸೇವಕ ಪ್ರದೀಪ್ ಡಿಸೋಜ, ಮಾಸ್ಟರ್ ಶಿವಣ್ಣ, ಸಕಲೇಶಪುರ ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿ ಹರೀಶ್, ನಿಕಟಪೂರ್ವ ಮಾಸ್ಟರ್ ಮಧುವರನ್, ಶೌರ್ಯ ಘಟಕದ ಸಂಯೋಜಕಿ ದಿವ್ಯ, ಬೈಕೆರೆ ಘಟಕದ ಸಂಯೋಜಕಿ ಸರೋಜ ಹಾಗೂ ಎರಡೂ ಘಟಕಗಳ ಯೋಧರು ಭಾಗವಹಿಸಿದ್ದರು.
ಒಟ್ಟಿನಲ್ಲಿ ಈ ಕಾರ್ಯಕ್ರಮದ ಮೂಲಕ ಮುಂದಿನ ಪೀಳಿಗೆಗೆ ಹಸಿರು ಪರಿಸರ ನಿರ್ಮಿಸುವುದು, ವನ್ಯಜೀವಿಗಳಿಗೆ ಕಾಡಿನಲ್ಲಿಯೇ ಆಹಾರ ಲಭ್ಯವಾಗುವಂತೆ ಮಾಡುವುದು ಹಾಗೂ ಮನುಷ್ಯ–ಪ್ರಾಣಿ ಸಂಘರ್ಷವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಮಹತ್ವದ ಸಂದೇಶ ನೀಡಲಾಯಿತು.
Kshetra Samachara
05/08/2026 02:50 pm