ಹಾಸನ: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ವತಿಯಿಂದ ಜುಲೈ 24ರಂದು ಹಾಸನದ ಕಾವೇರಿ ನೀರಾವರಿ ನಿಗಮ ಇಲಾಖೆಯ ಸಭಾಂಗಣದಲ್ಲಿ ಕಾಫಿ ಬೆಳೆಗಾರರ ಕುಂದುಕೊರತೆಗಳು ಹಾಗೂ ಅಹವಾಲುಗಳ ಕುರಿತು ಸಭೆ ನಡೆಯಿತು. ಸಭೆಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟ ಹಾಗೂ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಪದಾಧಿಕಾರಿಗಳು ಭಾಗವಹಿಸಿ, ಕಾಫಿ ಬೆಳೆಗಾರರ ಸಮಸ್ಯೆಗಳ ಕುರಿತು ಹಲವು ಪ್ರಮುಖ ಮನವಿಗಳನ್ನು ಸಲ್ಲಿಸಿದರು.
ಸಭೆಯಲ್ಲಿ 10 ಎಚ್.ಪಿ. ಪಂಪ್‌ಸೆಟ್ ಹೊಂದಿರುವ ಹಾಗೂ ವಿದ್ಯುತ್ ಶುಲ್ಕ ಪಾವತಿಸುತ್ತಿರುವ ಕಾಫಿ ಬೆಳೆಗಾರರಿಗೆ ಡಿಬಿಟಿ (DBT) ಸೌಲಭ್ಯವನ್ನು ಶೀಘ್ರ ಜಾರಿಗೆ ತರಬೇಕು ಎಂದು ಒತ್ತಾಯಿಸಲಾಯಿತು. ಪಹಣಿಯಲ್ಲಿ "ಮಿಶ್ರ ಬೆಳೆ" ಎಂದು ನಮೂದಾಗಿರುವ ಕಾರಣ ತಂತ್ರಾಂಶ ಡಿಬಿಟಿ ಅರ್ಜಿಗಳನ್ನು ಸ್ವೀಕರಿಸದ ಸಮಸ್ಯೆಯನ್ನು ಪರಿಹರಿಸುವಂತೆ ಮನವಿ ಮಾಡಲಾಯಿತು.
ಕಾಫಿ ಬೆಳೆಗಾರರು ವರ್ಷದಲ್ಲಿ ಕೇವಲ ಮೂರು ತಿಂಗಳು ಮಾತ್ರ ನೀರಾವರಿಗಾಗಿ ಪಂಪ್‌ಸೆಟ್ ಬಳಸುತ್ತಿದ್ದರೂ, ವರ್ಷಪೂರ್ತಿ ವಿದ್ಯುತ್ ಶುಲ್ಕ ವಿಧಿಸಲಾಗುತ್ತಿದೆ. ಆದ್ದರಿಂದ ಉಳಿದ ಅವಧಿಯ ಶುಲ್ಕವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಲಾಯಿತು.
ಇದೇ ವೇಳೆ, ಪಂಪ್‌ಸೆಟ್ ಬಾಕಿ ವಿದ್ಯುತ್ ಶುಲ್ಕದ ಮೇಲಿನ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡುವುದು, ಹೆಚ್ಚುವರಿ ಲೋಡ್ (BMD) ದಂಡವನ್ನು ರದ್ದುಗೊಳಿಸುವುದು, ಮಲೆನಾಡು ಭಾಗದಲ್ಲಿ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ನಿರಂತರ ಮೂರು ಹಂತದ (3-ಫೇಸ್) ವಿದ್ಯುತ್ ಪೂರೈಕೆ ಕಲ್ಪಿಸುವುದು ಹಾಗೂ ಕಾಫಿ ತೋಟಗಳಲ್ಲಿ ಹಾದುಹೋಗಿರುವ ವಿದ್ಯುತ್ ಲೈನ್‌ಗಳನ್ನು ರಸ್ತೆ ಬದಿಗೆ ಸ್ಥಳಾಂತರಿಸಿ ಕೇಬಲ್ ಅಳವಡಿಸುವುದರ ಜೊತೆಗೆ ಲೈನ್‌ಮನ್‌ಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಒತ್ತಾಯಿಸಲಾಯಿತು.
ಸಭೆಯಲ್ಲಿ ಕರ್ನಾಟಕ ಗ್ರೋವರ್ಸ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಟಿ.ಪಿ. ಸುರೇಂದ್ರ, ಉಪಾಧ್ಯಕ್ಷ ಬಿ.ಎಂ. ನಾಗರಾಜ್, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಮಂಜುನಾಥ್ ಶೆಟ್ಟಿ, ಹೆಚ್.ಡಿ.ಪಿ.ಎ. ಗೌರವ ಕಾರ್ಯದರ್ಶಿ ಹೆಗ್ಗೋವೆ ಪುಟ್ಟರಾಜು, ಉಪಾಧ್ಯಕ್ಷ ಎಂ.ಜೆ. ಸಚಿನ್, ವಿವಿಧ ತಾಲ್ಲೂಕು ಬೆಳೆಗಾರರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಹಿರಿಯ ಪದಾಧಿಕಾರಿಗಳು ಉಪಸ್ಥಿತರಿದ್ದು, ಕಾಫಿ ಬೆಳೆಗಾರರ ಹಿತಾಸಕ್ತಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರ ಮತ್ತು ಸಂಬಂಧಿತ ಇಲಾಖೆಗೆ ಮನವಿ ಮಾಡಿದರು
Kshetra Samachara
25/07/2026 11:10 am