ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ನೀಡುತ್ತಾರೆ ಈ ದಂಪತಿ

ಧಾರವಾಡ: ಈ ದಂಪತಿ ಇಬ್ಬರೂ "ಅಕ್ಕ" ಎಂಬ ಕ್ಯಾಂಟೀನ್ ನಡೆಸುತ್ತ ಜೀವನ ನಡೆಸುತ್ತಿದ್ದಾರೆ. ಎಲೆಮರೆಯ ಕಾಯಿಯಂತೆ ಸಮಾಜ ಸೇವೆಯನ್ನೂ ಮಾಡುತ್ತ ಬಂದಿದ್ದಾರೆ. ಆದರೆ ಇವರ ಕಾರ್ಯ ಯಾವತ್ತೂ ಬೆಳಕಿಗೆ ಬಂದಿರಲಿಲ್ಲ. ಈ ಬಾರಿ ಈ ದಂಪತಿ ಮಾಡಿದ ಸಮಾಜ ಸೇವೆ ಎಲ್ಲರ ಮನ ಮುಟ್ಟುವಂತೆ ಮಾಡಿದೆ. ಹೀಗಾಗಿ ಸ್ವತಃ ಧಾರವಾಡ ಜಿಲ್ಲಾಧಿಕಾರಿಯವರೇ ಇವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮಂಜುನಾಥ ಮತ್ತು ರಾಜೇಶ್ವರಿ ಎಂಬ ದಂಪತಿ ಬಹಳ ವರ್ಷಗಳಿಂದ ಶಾಲಾ ಮಕ್ಕಳಿಗೆ ಶಾಲೆಯ ಬ್ಯಾಗು ಮತ್ತು ಶಾಲಾ ಸಮವಸ್ತ್ರ ವಿತರಿಸುತ್ತ ಬಂದಿದ್ದಾರೆ. ಆದರೆ ಇವರ ಈ ಸೇವೆ ಎಲೆಮರೆಯ ಕಾಯಿಯಂತೆಯೇ ಉಳಿದಿತ್ತು. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಬಳಿ 'ಅಕ್ಕ' ಕ್ಯಾಂಟೀನ್ ನಡೆಸುವ ಇವರು, ಈ ಬಾರಿಯೂ ಸರ್ಕಾರಿ ಶಾಲೆಯ ಎಲ್‌ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಸಮವಸ್ತ್ರ ಕೊಡಿಸುವ ಮೂಲಕ ನೆರವಿನ ಹಸ್ತ ಚಾಚಿದ್ದಾರೆ. ಧಾರವಾಡ ನಗರದ ಮಾಳಮಡ್ಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 60 ಮಕ್ಕಳಿಗೆ ಸಮವಸ್ತ್ರ ಕೊಡಿಸಿದ್ದಾರೆ. "ಖಾಸಗಿ ಶಾಲೆಯ ಮಕ್ಕಳಿಗೆ ಸಮವಸ್ತ್ರ ಇದ್ದೇ ಇರುತ್ತದೆ. ಆದರೆ, ಸರ್ಕಾರಿ ಶಾಲೆಯ ಮಕ್ಕಳೂ ಒಳ್ಳೆಯ ಸಮವಸ್ತ್ರ ಧರಿಸಬೇಕು, ಅವರೂ ಖಾಸಗಿ ಶಾಲೆಯ ಮಕ್ಕಳಿಗಿಂತ ಕಡಿಮೆಯಿಲ್ಲ ಎನ್ನುವಂತಾಗಬೇಕು" ಎಂಬ ಉದ್ದೇಶದಿಂದ ಇಷ್ಟು ವರ್ಷಗಳಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಇವರು ಉಚಿತವಾಗಿ ನಿಸ್ವಾರ್ಥ ಮನೋಭಾವದಿಂದ ಸಮವಸ್ತ್ರ ಕೊಡಿಸುತ್ತ ಬಂದಿದ್ದಾರೆ.

"ಅಕ್ಕ" ಎಂಬ ಕ್ಯಾಂಟೀನ್‌ನಿಂದ ಬರುವ ಲಾಭ ಮತ್ತು ಮದುವೆ ಸಮಾರಂಭಗಳಲ್ಲಿ ಇವರು ಮಾಡಿಕೊಡುವ ಅಡುಗೆಯ ಲಾಭದಲ್ಲೇ ಅಷ್ಟಿಷ್ಟು ಹಣ ಕೂಡಿಟ್ಟು ಈ ರೀತಿ ಸಮಾಜ ಸೇವೆ ಮಾಡುತ್ತ ಬಂದಿದ್ದಾರೆ. ಈ ಬಾರಿ ಈ ದಂಪತಿಯ ಸಮವಸ್ತ್ರ ವಿತರಣೆ ಕಾರ್ಯಕ್ರಮಕ್ಕೆ ಸ್ವತಃ ಜಿಲ್ಲಾಧಿಕಾರಿಯವರೇ ಬಂದಿದ್ದರು. ಈ ದಂಪತಿ ಮಾಡಿದ ಕಾರ್ಯಕ್ಕೆ ಅವರೂ ಸಹ ಮೆಚ್ಚುಗೆ ವ್ಯಕ್ತಪಡಿಸಿದರು.

ಒಟ್ಟಾರೆ ಸರ್ಕಾರಿ ಶಾಲೆಗೆ ಸರಿಯಾದ ಸಮವಸ್ತ್ರವಿಲ್ಲದೆ ಬರುತ್ತಿದ್ದ ಧಾರವಾಡದ ಈ ಶಾಲೆಯ ಎಲ್‌ಕೆಜಿ ಹಾಗೂ ಯುಕೆಜಿ ಮಕ್ಕಳು ಇದೀಗ ಖಾಸಗಿ ಶಾಲೆಯ ಮಕ್ಕಳಂತೆಯೇ ಅಚ್ಚುಕಟ್ಟಾದ ಸಮವಸ್ತ್ರ ಧರಿಸಿ ಬರಲಿದ್ದಾರೆ. ನಿಸ್ವಾರ್ಥ ಮನೋಭಾವದಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ಕೊಡಿಸುತ್ತ ಬರುತ್ತಿರುವ ಈ ದಂಪತಿಗೆ ನಾವೂ ಒಂದು ಮೆಚ್ಚುಗೆ ವ್ಯಕ್ತಪಡಿಸಲೇಬೇಕಲ್ಲವೇ?

- ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

29/07/2026 05:30 pm

Cinque Terre

47.56 K

Cinque Terre

1

ಸಂಬಂಧಿತ ಸುದ್ದಿ