ಹುಬ್ಬಳ್ಳಿ: ಸಮಾಜಕ್ಕೆ ನಿಸ್ವಾರ್ಥ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಜಯಪ್ರಿಯಾ ಆಸ್ಪತ್ರೆಯ ಮುಖ್ಯ ವೈದ್ಯರಾದ ಡಾ. ವೆಂಕಟರಾಮ್ ಕಟ್ಟಿ ಅವರಿಗೆ ರಾಷ್ಟ್ರಮಟ್ಟದ ಗೌರವ ದೊರೆತಿದೆ. 2026ರ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ, ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಾಷ್ಟ್ರೀಯ ಸಮುದಾಯ ಸೇವಾ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಜಯಪ್ರಿಯಾ ವೈದ್ಯಕೀಯ ಪ್ರತಿಷ್ಠಾನವು 2007ರಿಂದ ಉತ್ತರ ಕರ್ನಾಟಕದ ಗ್ರಾಮೀಣ, ಗುಡ್ಡಗಾಡು, ಕೊಳೆಗೇರಿ ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ಸಮಗ್ರ ಕಣ್ಣಿನ ಆರೈಕೆ ಮತ್ತು ಕುರುಡುತನ ತಡೆಗಟ್ಟುವ ಸೇವೆಗಳನ್ನು ನೀಡುತ್ತಾ ಬಂದಿದೆ. ಡಾ. ವೆಂಕಟರಾಮ್ ಕಟ್ಟಿ ಅವರ ನೇತೃತ್ವದಲ್ಲಿ ಸಂಸ್ಥೆಯ ವತಿಯಿಂದ ಉತ್ತರ ಕರ್ನಾಟಕದಾದ್ಯಂತ 2 ಸಾವಿರಕ್ಕೂ ಹೆಚ್ಚು ಉಚಿತ ಕಣ್ಣಿನ ಶಿಬಿರಗಳನ್ನು ಆಯೋಜಿಸಲಾಗಿದೆ. 12.4 ಲಕ್ಷಕ್ಕೂ ಹೆಚ್ಚು ಜನರಿಗೆ ಉಚಿತ ಕಣ್ಣಿನ ತಪಾಸಣೆ ನಡೆಸಲಾಗಿದ್ದು, 90 ಸಾವಿರಕ್ಕೂ ಹೆಚ್ಚು ಜನರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಜೊತೆಗೆ 250ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲಿ 11 ಗ್ರಾಮೀಣ ದೃಷ್ಟಿ ಕೇಂದ್ರಗಳನ್ನು ಸ್ಥಾಪಿಸಿದ್ದು, ಸಾವಿರಾರು ಜನರಿಗೆ ಕಣ್ಣಿನ ಆರೈಕೆ ಸೇವೆ ಒದಗಿಸಲಾಗುತ್ತಿದೆ. ಅಗತ್ಯವಿರುವವರಿಗೆ ಉಚಿತ ಕನ್ನಡಕ ವಿತರಣೆ, ವಾಹನ ಚಾಲಕರಿಗೆ ದೃಷ್ಟಿ ಸುರಕ್ಷತಾ ತಪಾಸಣೆ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಇದಲ್ಲದೆ, ಮಹಿಳಾ ಸಬಲೀಕರಣದ ಉದ್ದೇಶದಿಂದ 18-22 ವರ್ಷದೊಳಗಿನ ಮಹಿಳೆಯರಿಗೆ ಡಿಪ್ಲೊಮಾ ಇನ್ ಆಪ್ತಾಲ್ಮಿಕ ಅಸಿಸ್ಟೆಂಟ್ ಕೋರ್ಸ್‌ನ್ನು ಸಹ ಉಚಿತವಾಗಿ ನೀಡಲಾಗುತ್ತಿದೆ. ಈ ಸೇವೆಯನ್ನು ಗುರುತಿಸಿ ರಾಷ್ಟ್ರೀಯ ಸಮುದಾಯ ಸೇವಾ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಇನ್ನು ಸಮಾಜದ ಆರೋಗ್ಯ ಕ್ಷೇತ್ರಕ್ಕೆ ನೀಡುತ್ತಿರುವ ವಿಶಿಷ್ಟ ಸೇವೆಯನ್ನು ಗುರುತಿಸಿ ಡಾ. ವೆಂಕಟರಾಮ್ ಕಟ್ಟಿ ಅವರಿಗೆ ರಾಷ್ಟ್ರಮಟ್ಟದ ರಾಷ್ಟ್ರೀಯ ಸಮುದಾಯ ಸೇವಾ ಪ್ರಶಸ್ತಿ ದೊರೆತಿರುವುದು ಜಯಪ್ರಿಯಾ ಆಸ್ಪತ್ರೆಯ ಸೇವೆಗೆ ಮತ್ತೊಂದು ಗರಿಮೆ ತಂದಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/07/2026 08:08 pm
LOADING...