ಹೊಸಪೇಟೆ: ಆಗಸ್ಟ್ 3ನೇ ತಾರೀಖಿನ ಒಳಗೆ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು. ಒಂದು ವೇಳೆ ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡದೇ ಹೋದರೆ, ಒಂದು ದಿನ ಪೂರ್ತಿ ರೈತರೊಂದಿಗೆ ಹೊಲಗಳಲ್ಲಿ ಕುಳಿತು ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ ಎಂದು ಬರಗಾಲ ಘೋಷಣೆ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಗಡುವು ನೀಡಿದ್ದಾರೆ.
ರಾಜ್ಯದಲ್ಲಿ 150ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರಗಾಲ ಬಂದಿದೆ. ಇಷ್ಟು ದೊಡ್ಡ ಪ್ರಮಾಣದ ಬರಗಾಲ ಬಂದಿದ್ದರೂ ಅದರ ಬಗ್ಗೆ ಮುಖ್ಯಮಂತ್ರಿಗೆ ಕಾಳಜಿ ಇಲ್ಲ. ಸಿಎಂ ಜಿಲ್ಲಾವಾರು ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚುರುಕು ಮುಟ್ಟಿಸಬೇಕಿತ್ತು. ರೈತರು ಗುಳೆ ಹೋಗುತ್ತಿದ್ದಾರೆ, ಅದನ್ನು ತಡೆಗಟ್ಟಲು ಕ್ರಮ ವಹಿಸಬೇಕಿತ್ತು. ಇದ್ಯಾವುದನ್ನೂ ಮಾಡದೇ ಇಡೀ ಸರ್ಕಾರವೇ ನಿರ್ಲಕ್ಷ್ಯ ವಹಿಸಿದೆ.
ಸರ್ಕಾರಕ್ಕೆ ಬರಗಾಲ ಬಂದಿದೆ ಎಂದೇ ಅನಿಸುತ್ತಿಲ್ಲ. ಎಲ್ಲ ಕಡೆ ಕಾಂಟ್ರಾಕ್ಟರ್ ಕರೆದು ಟೆಂಡರ್ ಮಾಡುವುದು, ಅದರಲ್ಲಿ ಕಮಿಷನ್ ಹೊಡೆಯುವುದರಲ್ಲೇ ಸರ್ಕಾರ ತೊಡಗಿಸಿಕೊಂಡಿದೆ. ಕಳೆದ ಒಂದು ತಿಂಗಳಿಂದ ಸಂಪುಟ ವಿಸ್ತರಣೆಗಾಗಿ ಸಿಎಂ, ಸಚಿವರು ಹಾಗೂ ಶಾಸಕರು ದೆಹಲಿಗೆ ಟೂರ್ ಹೋಗುತ್ತಿದ್ದಾರೆ. ಇವರಿಗೆ ಬರಗಾಲದ ಬಗ್ಗೆ ಕಾಳಜಿಯೇ ಇಲ್ಲ. ಸಾರ್ವಜನಿಕರು ಶೀಘ್ರದಲ್ಲೇ ನಿಮ್ಮನ್ನು ಖಾಯಂ ಆಗಿ ದೆಹಲಿಗೆ ಕಳುಹಿಸುತ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಅಶೋಕ್ ವ್ಯಂಗ್ಯವಾಡಿದರು.
"ವಿಪಕ್ಷ ನಾಯಕನಾಗಿ ನಾನು ಇಲ್ಲಿಗೆ ಬಂದು ರೈತರ ಕಷ್ಟಗಳನ್ನು ಆಲಿಸಿದ್ದೇನೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತುತ್ತೇನೆ" ಎಂದು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಭುವನಹಳ್ಳಿ ಗ್ರಾಮದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
PublicNext
31/07/2026 07:28 am
LOADING...