ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನಾಳೆ ಪೊಲೀಸ್ ನೇಮಕಾತಿ ಪರೀಕ್ಷೆ - ಜಂಟಿಯಾಗೇ ರೌಂಡ್ಸ್ ಹಾಕಿದ ಡಿಸಿ, ಪೊಲೀಸ್ ಕಮಿಷನರ್

ಧಾರವಾಡ: ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವಂತೆ ಆಗ್ರಹಿಸಿ ಧಾರವಾಡದಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಈ ಪ್ರತಿಭಟನೆಗಳು ನಡೆದ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ರಾಜ್ಯದಲ್ಲಿ ಖಾಲಿ ಇರುವ ಸುಮಾರು 3991 ಪೊಲೀಸ್ ಕಾನ್‌ಸ್ಟೇಬಲ್‌ಗಳ ನೇಮಕಾತಿಗೆ ಭಾನುವಾರ ಪರೀಕ್ಷೆ ನಡೆಸಲಿದೆ.

ಜಿಲ್ಲೆಯಲ್ಲಿ ಸುಮಾರು 19536 ಜನ ಅಭ್ಯರ್ಥಿಗಳು ಪರೀಕ್ಷೆಗಾಗಿ ತಮ್ಮ ಹೆಸರು ನೋಂದಾಯಿಸಿದ್ದಾರೆ. ಅವರಿಗಾಗಿ ಅವಳಿ ನಗರದಲ್ಲಿ 55 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆ ದೆಹಲಿಯಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಇಡೀ ದೇಶದ ಗಮನ ಸೆಳೆದು ವಿದೇಶಗಳಲ್ಲೂ ಸುದ್ದಿಯಾಗಿತ್ತು. ಈ ಹಿನ್ನೆಲೆ ಪೊಲೀಸ್ ಕಾನ್‌ ಸ್ಟೇಬಲ್‌ ಪ್ರಶ್ನೆ ಪತ್ರಿಕೆ ಸಹ ಸೋರಿಕೆಯಾಗದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ನಾಳೆ ನಡೆಯುವ ಪರೀಕ್ಷೆ ಹೇಗಿರುತ್ತದೆ? ಅಭ್ಯರ್ಥಿಗಳು ಯಾವ ರೀತಿ ಪರೀಕ್ಷೆಗೆ ಬರಬೇಕು ಎಂಬುದರ ಕುರಿತು ಸ್ವತಃ ಜಿಲ್ಲಾಧಿಕಾರಿ ಆರ್.ಸ್ನೇಹಲ್, ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹಾಗೂ ಎಸ್‌ಪಿ ಗುಂಜನ್ ಆರ್ಯ ಅವರು ಧಾರವಾಡದ ಜಯನಗರ, ಸಪ್ತಾಪುರ, ಶ್ರೀನಗರ ಸೇರಿದಂತೆ ಇತರ ಕಡೆ ಇರುವ ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳನ್ನು ಭೇಟಿಯಾಗಿ ಅವರಿಗೆ ಸೂಚನೆ ನೀಡುವುದರೊಂದಿಗೆ ಶುಭಾಶಯಗಳನ್ನೂ ತಿಳಿಸಿದರು.

ಅಲ್ಲದೇ ಲಿಂಗಾಯತ ಭವನದಲ್ಲಿ ಝೆರಾಕ್ಸ್ ಅಂಗಡಿ ಮಾಲೀಕರು, ಸೈಬರ್ ಕೆಫೆ ಮಾಲೀಕರೊಂದಿಗೂ ಸಭೆ ನಡೆಸಿ ನಾಳೆ ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಇರಲಿದ್ದು, ಯಾವುದೇ ಕಾರಣಕ್ಕೂ ಝೆರಾಕ್ಸ್ ಅಂಗಡಿ, ಸೈಬರ್ ಕೆಫೆಗಳನ್ನು ತೆರೆಯದಂತೆ ಸೂಚನೆ ನೀಡಿದರು. ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಇತ್ಯಾದಿ ಕಾನೂನು ಬಾಹಿರ ಚಟುವಟಿಕೆ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೂಡ ಜರುಗಿಸಲಾಗುತ್ತಿದೆ ಎಂಬ ಸೂಚನೆಯನ್ನು ಪೊಲೀಸ್ ಆಯುಕ್ತರು ನೀಡಿದರು.

ಪ್ರಸಕ್ತ ವರ್ಷದ ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಗೆ ಡ್ರೆಸ್ ಕೋಡ್ ಮಾಡಲಾಗಿದೆ. ಹೆಣ್ಣು ಮಕ್ಕಳಿಗೆ ತಾಳಿ ಹಾಕಿಕೊಂಡು ಹೋಗಲು ಹಾಗೂ ಗಂಡು ಮಕ್ಕಳು ಶಿವದಾರ, ಜನಿವಾರ ಹಾಕಿಕೊಂಡು ಹೋಗಲು ಅವಕಾಶ ನೀಡಲಾಗಿದೆ. ಅದಕ್ಕಿಂತ ಮುಂಚೆ ಎಲ್ಲಾ ತಪಾಸಣೆ ನಡೆಯಲಿದೆ. ಪರೀಕ್ಷೆ ಹಿನ್ನೆಲೆ ಡಿಸಿ, ಪೊಲೀಸ್ ಆಯುಕ್ತರು ಹಾಗೂ ಎಸ್‌ಪಿ ಅವರು ಜಂಟಿಯಾಗಿಯೇ ಧಾರವಾಡದ ಸಪ್ತಾಪುರ, ಜಯನಗರ, ಶ್ರೀನಗರದಲ್ಲಿರುವ ಪರೀಕ್ಷೆ ಬರೆಯುವ ಅಭ್ಯರ್ಥಿಗಳನ್ನು ಭೇಟಿ ಮಾಡಿ ಅವರಿಗೆ ಮಾರ್ಗದರ್ಶನ ಮಾಡಿದರು.

ಒಟ್ಟಾರೆ ಕೆಲ ವರ್ಷಗಳ ನಂತರ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

01/08/2026 07:18 pm

Cinque Terre

162.28 K

Cinque Terre

0

ಸಂಬಂಧಿತ ಸುದ್ದಿ