ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಸ್ಮಾರ್ಟ್ ಸೈಕಲ್ ಯೋಜನೆಗೆ ಮುಖಭಂಗ: 8.5 ಕೋಟಿ ರೂ. ನೀರು ಪಾಲು!

ಹುಬ್ಬಳ್ಳಿ: ಬಾಡಿಗೆ ಸೈಕಲ್ ಅರ್ಥಾತ್ ಸಾರ್ವಜನಿಕ ಸೈಕಲ್ ಸವಾರಿ ಯೋಜನೆ ಬಹುತೇಕ ನೇಪಥ್ಯಕ್ಕೆ ಸರಿಯುವ ಕಾಲ ಬಂದಿದೆ. ಬೈಕ್, ಕಾರು ಶೋಕಿಯ ಜನರು ಸೈಕಲ್ ಎಂದರೆ ಅಷ್ಟಕ್ಕಷ್ಟೇ ಎನ್ನುತ್ತಿದ್ದಾರೆ. ಒಂದು ಸಣ್ಣ ಕೆಲಸಕ್ಕೂ ಬೈಕ್ ಕೀ ಎತ್ತಿಕೊಳ್ಳುವ ಜನರು, ದೇಹದ ವ್ಯಾಯಾಮಕ್ಕೆ ಸಹಕಾರಿಯಾಗುವ ಸೈಕಲ್ ಹತ್ತಲು ಹಿಂದೆ-ಮುಂದೆ ನೋಡುತ್ತಿದ್ದಾರೆ.

ಜನರಲ್ಲಿ ಸೈಕಲ್ ಕ್ರೇಜ್ ಬೆಳೆಸಬೇಕು, ಸಣ್ಣ ದೂರವನ್ನೂ ಸೈಕಲ್ ಮೇಲೆ ಓಡಾಡಿ ಪರಿಸರ ಕಾಳಜಿ ಮೆರೆಯಲಿ ಎಂಬ ಕಾರಣಕ್ಕೆ ಆರಂಭಿಸಿದ್ದ ಸ್ಮಾರ್ಟ್ ಸಿಟಿಯ ಸಾರ್ವಜನಿಕ ಸೈಕಲ್ ಸವಾರಿ ಯೋಜನೆ (ಪಬ್ಲಿಕ್ ಬೈಸಿಕಲ್ ಶೇರಿಂಗ್) ಇದೀಗ ಧೂಳು ತಿನ್ನುತ್ತಿದೆ. ಎಲ್ಲದಕ್ಕೂ ಸ್ಥಳೀಯವಾಗಿ ಅಧ್ಯಯನ ಮಾಡಿಯೇ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದೇವೆ ಎಂದು ಅಧಿಕಾರಿಗಳು ಹೇಳಿಕೊಳ್ಳುತ್ತಿದ್ದರು. ಆದರೆ, ಇಲ್ಲಿ ಅಧ್ಯಯನವು ಲೆಕ್ಕಕ್ಕಿಲ್ಲದಂತಾಗಿದ್ದು, ಸೈಕಲ್‌ನತ್ತ ಜನರು ತಿರುಗಿ ನೋಡುತ್ತಿಲ್ಲ.

ಈ ಮೊದಲು ಪ್ರತಿ ಹಳ್ಳಿ, ಶಹರಗಳಲ್ಲಿ ಬಾಡಿಗೆ ಸೈಕಲ್‌ಗಳು ಇದ್ದವು. ಅದೇ ಮಾದರಿಯಲ್ಲಿ ಪ್ರತಿ ಗಂಟೆಗೆ ಕೇವಲ 5 ರೂ.ನಂತೆ ಸ್ಮಾರ್ಟ್ ಸೈಕಲ್ ಸವಾರಿ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ನಗರದ 34 ಕಡೆಗಳಲ್ಲಿ ಡಾಕಿಂಗ್ ಸ್ಟೇಷನ್ ನಿರ್ಮಿಸಲಾಗಿದೆ. ಸಾರ್ವಜನಿಕರು ತಾವು ಒಂದು ನಿಲ್ದಾಣದಿಂದ ಪಡೆದ ಸೈಕಲ್ ಅನ್ನು ನಿಗದಿತ ಸ್ಥಳದವರೆಗೆ ಕೊಂಡೊಯ್ದು ಸಮೀಪದ ಡಾಕಿಂಗ್ ಸ್ಟೇಷನ್‌ನಲ್ಲಿ ಇಡಬಹುದಾಗಿದೆ.

ಆಗೆಲ್ಲ ಬೆಳ್ಳಂಬೆಳಗ್ಗೆ ಸೈಕಲ್ ತುಳಿದುಕೊಂಡು ಅನೇಕರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುತ್ತಿದ್ದರು. ತೋಳನಕೆರೆ, ಟೆಂಡರ್ ಶೂರ್ ರಸ್ತೆ, ಉಣಕಲ್ ಮುಂತಾದ ಕಡೆಗಳಲ್ಲಿ ಇವು ಹೆಚ್ಚು ಕಾಣಿಸುತ್ತಿದ್ದವು. ಆರೋಗ್ಯಯುತ ಜೀವನ ಹಾಗೂ ಪರಿಸರ ಸ್ನೇಹಿ ಸಾರಿಗೆಯನ್ನು ಅನೇಕರು ಇಷ್ಟಪಟ್ಟಿದ್ದರು. ಆರಂಭದಲ್ಲಿ ಈ ಯೋಜನೆಗೆ ಬಹಳಷ್ಟು ಉತ್ಸಾಹ ತೋರಿದ್ದ ಜನರು, ಇದೀಗ ಬಳಕೆಯನ್ನು ತೀವ್ರವಾಗಿ ಕಡಿಮೆ ಮಾಡಿದ್ದಾರೆ.

ಸೈಕಲ್ ಹಾಗೂ ಇತರ ವ್ಯವಸ್ಥೆಗೆ 8.5 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. 34 ಸೈಕಲ್ ತಂಗುದಾಣ (ಡಾಕಿಂಗ್ ಸ್ಟೇಷನ್‌)ಗಳಿಂದ 340 ಸೈಕಲ್‌ಗಳು ಸವಾರರಿಗೆ ಲಭ್ಯವಿವೆ. 3,200 ಜನರು ಸೈಕಲ್ ಬಳಕೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಈ ಮಧ್ಯೆ ಬೈಸಿಕಲ್ ಯೋಜನೆ ಜಾರಿಯಾಗಿ ಮೂರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಮೊದಲ ಒಂದು ತಾಸು ಸಂಪೂರ್ಣ ಉಚಿತ ಎಂದು ಘೋಷಣೆ ಮಾಡಲಾಗಿದೆ. ಆದರೂ, ಸವಾರರು ಮುಂದೆ ಬರುತ್ತಿಲ್ಲ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/08/2026 07:27 pm

Cinque Terre

11.85 K

Cinque Terre

3

ಸಂಬಂಧಿತ ಸುದ್ದಿ