ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ವೈದ್ಯನ ಕೊಲೆ ಪ್ರಕರಣ: ಪತಿಯ ಹತ್ಯೆಗೆ ಅಸಲಿ ಕಾರಣ ಬಿಚ್ಚಿಟ್ಟ ಪತ್ನಿ ಡಾ. ಪ್ರಿಯಾಂಕಾ

ಧಾರವಾಡ : ಆ ಒಂದು ಕೊಲೆ ಇಡೀ ಧಾರವಾಡವನ್ನೇ ಬೆಚ್ಚಿಬೀಳಿಸಿತ್ತು. ಆದರೆ, ಆ ಕೊಲೆಗೆ ಕಾರಣ ಮಾತ್ರ ನಿಗೂಢವಾಗಿತ್ತು. ಇದೀಗ ಆ ಕೊಲೆಗೆ ಕಾರಣ ಏನು ಎಂಬುದನ್ನು ಕೊಲೆ ಮಾಡಿದವಳೇ ಬಿಚ್ಚಿಟ್ಟಿದ್ದಾಳೆ.

ಹೌದು, ಇತ್ತೀಚೆಗಷ್ಟೇ ಧಾರವಾಡದ ರಂಕಾ ಸ್ಟೆಲ್ಲೊ ಅಪಾರ್ಟ್‌ಮೆಂಟ್‌ನಲ್ಲಿ ಅರವಳಿಕೆ ತಜ್ಞ ವೈದ್ಯ ಡಾ. ಕಿರಣ್ ಹೊನ್ನಣ್ಣವರ ಎಂಬುವವರ ಕೊಲೆ ನಡೆದು, ಡಾ. ಕಿರಣ್ ಅವರ ಪುತ್ರ ನಿಹಿತ್ ಮೇಲೂ ಮಾರಣಾಂತಿಕ ಚಾಕು ದಾಳಿ ನಡೆದಿತ್ತು. ಈ ಕೊಲೆ ಮಾಡಿದವರು ಬೇರೆ ಯಾರೂ ಆಗಿರಲಿಲ್ಲ. ಡಾ. ಕಿರಣ್ ಅವರ ಪತ್ನಿ ಪ್ರಿಯಾಂಕಾಳೇ ಈ ಕೊಲೆ ಮಾಡಿದ್ದಳು.

ರಾತ್ರಿ ಡಾ. ಕಿರಣ್ ಮಲಗಿದ್ದ ವೇಳೆ ಅವರಿಗೆ ಚಾಕು ಇರಿದು ಕೊಲೆ ಮಾಡಿದ್ದಳು. ಅಲ್ಲದೆ ತಾನು ಹೆತ್ತ ಮಗ ನಿಹಿತ್ ಮೇಲೂ ಚಾಕು ದಾಳಿ ನಡೆಸಿ, ತಾನೂ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಂಡಿದ್ದಳು. ಮರುದಿನ ಡಾ. ಕಿರಣ್ ಅವರ ಕೊಲೆ ನಡೆದಿದ್ದು ಎಲ್ಲರಿಗೂ ಗೊತ್ತಾಗಿದೆ. ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರ ಸಮಯಪ್ರಜ್ಞೆಯಿಂದ ಡಾ. ಕಿರಣ್ ಅವರ ಪುತ್ರ ನಿಹಿತ್ ಪ್ರಾಣ ಉಳಿದಿದೆ.

ಈ ಕೊಲೆಯನ್ನು ಆಕೆ ಯಾಕೆ ಮಾಡಿದ್ದಳು ಎಂಬುದು ಮಾತ್ರ ನಿಗೂಢವಾಗಿತ್ತು. ವೈದ್ಯೆಯಾಗಿರುವ ಪ್ರಿಯಾಂಕಾ ಕೂಡ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಂಡಿದ್ದರಿಂದ ಆಕೆಯನ್ನು ವಶಕ್ಕೆ ಪಡೆದಿದ್ದ ಪೊಲೀಸರು ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಿಸಿದ್ದರು. ಇದೀಗ ಆಕೆ ಗುಣಮುಖಳಾಗಿದ್ದು, ಸದ್ಯ ಆಕೆಯನ್ನು ಬಂಧಿಸಿ ಕೇಂದ್ರ ಕಾರಾಗೃಹದಲ್ಲಿಡಲಾಗಿದೆ.

"ತನ್ನ ಪತಿ ಡಾ. ಕಿರಣ್ ಹೊರಗಡೆ ಚೆನ್ನಾಗಿಯೇ ಇರುತ್ತಿದ್ದ. ನನ್ನ ಹತ್ತಿರ ಮಾತ್ರ ಸರಿಯಾಗಿ ನಡೆದುಕೊಳ್ಳುತ್ತಿರಲಿಲ್ಲ. ಆತನಿಗೆ ಬೇರೆ ಹೆಣ್ಣುಮಕ್ಕಳೊಂದಿಗೆ ಸಂಬಂಧ ಇತ್ತು ಎಂಬ ಸಂಶಯ ನನಗಿತ್ತು. ಇದೇ ಕಾರಣಕ್ಕಾಗಿ ನಮ್ಮಿಬ್ಬರ ಮಧ್ಯೆ ಜಗಳ ನಡೆದಿತ್ತು. ಇದೇ ವಿಚಾರಕ್ಕೆ ನಾನು ಡಾ. ಕಿರಣ್‌ ಅವರನ್ನು ಕೊಲೆ ಮಾಡಿದ್ದೇನೆ" ಎಂದು ಡಾ. ಪ್ರಿಯಾಂಕಾ ತಿಳಿಸಿದ್ದಾಳೆ. ಈ ಸಂಬಂಧ ಇನ್ನೂ ಹೆಚ್ಚಿನ ವಿಚಾರಣೆ ನಡೆಯಬೇಕಿದೆ ಎಂದು ಪೊಲೀಸರು ಪ್ರಾಥಮಿಕವಾಗಿ ತಿಳಿಸಿದ್ದಾರೆ.

ಇಷ್ಟು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಾ. ಪ್ರಿಯಾಂಕಾಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ನೇರವಾಗಿ ಕೇಂದ್ರ ಕಾರಾಗೃಹಕ್ಕೆ ಕರೆದುಕೊಂಡು ಬರಲಾಗಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/08/2026 08:21 pm

Cinque Terre

20.5 K

Cinque Terre

1

ಸಂಬಂಧಿತ ಸುದ್ದಿ