ಹುಬ್ಬಳ್ಳಿ: ಅಪಾಯದ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ 583 ಗಿಡಗಳನ್ನು ಧರೆಗುರುಳಿಸಲಾಗಿದೆ. ಮಳೆ ಬಂದಾಗಲೋ ಅಥವಾ ಮನೆ, ರಸ್ತೆಗುಂಟ ಬಾಗಿ ಇನ್ನೊಬ್ಬರಿಗೆ ಹಾನಿ ಉಂಟು ಮಾಡುವುದನ್ನರಿತು ಅರಣ್ಯ ಇಲಾಖೆ ಕಳೆದ ಮೂರು ವರ್ಷಗಳಲ್ಲಿ ಇಂಥ ಕ್ರಮ ಕೈಗೊಂಡಿದೆ. ಜತೆಗೆ ವಿವಿಧ 612 ಗಿಡಗಳ ಟೊಂಗೆಗಳನ್ನು ಕಡಿದುಹಾಕಿದೆ. ಆದರೆ, ನಗರದ ಹಸಿರೀಕರಣದ ಬಗ್ಗೆ 'ಲಕ್ಷ ವೃಕ್ಷ' ಅಭಿಯಾನ ಆರಂಭಿಸಿದ್ದ ಪಾಲಿಕೆ ಗಿಡ ನೆಡುವ ಕಾರ್ಯವನ್ನು ಕೈಬಿಟ್ಟಂತಿದೆ.
ಮರ ಕಡಿಯುವ ಪ್ರಕ್ರಿಯೆ ಹೀಗಿದೆ:
ಗಿಡ ಕಡಿಯುವುದಕ್ಕೆ ಮುನ್ನ ಹು-ಧಾ ಮಹಾನಗರ ಪಾಲಿಕೆಯಿಂದ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಪಡೆಯಲಾಗುತ್ತದೆ. ಅಪಾಯಕಾರಿ ಮರಗಳನ್ನು ಗುರುತಿಸಿ ಸಾರ್ವಜನಿಕರು ಮಹಾನಗರ ಪಾಲಿಕೆಯ ಗಮನಕ್ಕೆ ತರುತ್ತಾರೆ. ಆಗ ಪಾಲಿಕೆಯು ತನ್ನ ಅಧೀನದ ತೋಟಗಾರಿಕೆ ವಿಭಾಗ ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಂದ ನಿಯಮಾನುಸಾರ ಒಪ್ಪಿಗೆ ಪಡೆಯುತ್ತದೆ. ಇದಾದ ಬಳಿಕ ಅರಣ್ಯ ಇಲಾಖೆಗೆ ಸಮಸ್ಯಾತ್ಮಕ ಗಿಡಗಳನ್ನು ಕಡಿಯಲು ಒಪ್ಪಿಗೆ ನೀಡುತ್ತದೆ.
ಇಂತಿಷ್ಟು ಗಿಡಗಳನ್ನು ಕಡಿಯುವ ಮುನ್ನ ಅರಣ್ಯ ಇಲಾಖೆಯೂ ಸ್ಥಳಕ್ಕೆ ಭೇಟಿ ನೀಡಿ ಸತ್ಯಾಸತ್ಯತೆ ಪರಿಶೀಲಿಸುತ್ತದೆ. ಇದರ ವರದಿಯನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (ಎಸಿಎಫ್) ಸಲ್ಲಿಸುತ್ತದೆ. ನಂತರ ಮರಗಳನ್ನು ಕಡಿಯಲು ಟೆಂಡರ್ ಕರೆಯಲಾಗುತ್ತದೆ. ಇದಾದ ಬಳಿಕ ಸಮಸ್ಯೆ ಉಂಟುಮಾಡುವ ಮರಗಳನ್ನು ಟೆಂಡರ್ ಪಡೆದವರು ಕಡಿಯುತ್ತಾರೆ. ಇದೇ ರೀತಿ ಕಳೆದ ಮೂರು ವರ್ಷಗಳಲ್ಲಿ ಹುಬ್ಬಳ್ಳಿ ನಗರ ವ್ಯಾಪ್ತಿಯಲ್ಲಿ 583 ಗಿಡಗಳನ್ನು ಕಡಿಯಲಾಗಿದೆ.
ಸಾರ್ವಜನಿಕರ ದೂರಿಗೆ ಸ್ಪಂದನೆ:
ಮನೆಯ ಮುಂದೆ ಅಥವಾ ಬೇರೆಯವರ ಮನೆಯಲ್ಲಿನ ಗಿಡಗಳು ಇತರರ ಮನೆ ಕಾಂಪೌಂಡ್‌ನತ್ತ ಬಾಗಿ ಜೀವಕ್ಕೆ ಹಾನಿ ಉಂಟು ಮಾಡುವಂತಿದ್ದರೆ ಸಾರ್ವಜನಿಕರು ಪಾಲಿಕೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರುತ್ತಾರೆ. ರಸ್ತೆಗುಂಟ ಹರಡಿರುವ ಗಿಡಗಳಿಂದಲೂ ಅಪಾಯವಿದೆ ಎಂದರಿತವರೂ ದೂರು ಸಲ್ಲಿಸುತ್ತಾರೆ. ಇವುಗಳನ್ನು ನಿಯಮದ ಪ್ರಕಾರವೇ ವಿಲೇವಾರಿ ಮಾಡಲಾಗುತ್ತದೆ. "ಹಾಗಂತ ಯಾರು ಬೇಕಾದರೂ ಗಿಡಗಳನ್ನು ಕಡಿಯುವಂತಿಲ್ಲ. ಕಡಿದರೆ ಅದು ಕಾನೂನುಬಾಹಿರ," ಎನ್ನುತ್ತಾರೆ ಅಧಿಕಾರಿಗಳು.
ಟೆಂಡರ್ ಪ್ರಕ್ರಿಯೆಯ ವಿಳಂಬ:
"ಟೆಂಡರ್ ಕರೆದ ತಕ್ಷಣ ಬಿಡ್ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಕೆಲವು ಸಲ ಗಿಡ ಕಡಿಯಲು ವರ್ಷಗಟ್ಟಲೆ ಸಮಯ ಹಿಡಿಯುತ್ತದೆ. ಕಳೆದ ವರ್ಷವೂ ಇದೇ ಪರಿಸ್ಥಿತಿ ಎದುರಾಗಿತ್ತು. ಕೊನೆಗೆ ಟೆಂಡರ್ ಪ್ರಕ್ರಿಯೆ ಮುಗಿದ ತಕ್ಷಣ ಬಾಕಿ ಉಳಿದ ಗಿಡಗಳನ್ನು ಕಡಿದುಹಾಕಲಾಯಿತು," ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಗಳು.
"ಕಳೆದ ಮೂರು ವರ್ಷಗಳಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಉಂಟುಮಾಡುವ 583 ಗಿಡಗಳನ್ನು ಕಡಿಯಲಾಗಿದೆ. ಇದು ಒಮ್ಮೆಲೇ ಆಗುವ ಪ್ರಕ್ರಿಯೆಯಲ್ಲ. ಮಹಾನಗರ ಪಾಲಿಕೆ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಅನುಮತಿ ಪಡೆಯಬೇಕು. ಟೆಂಡರ್ ನಂತರ ಗಿಡ ಕಡಿಯುವ ಪ್ರಕ್ರಿಯೆ ನಡೆಸಲಾಗುತ್ತದೆ."
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/08/2026 02:17 pm