ಮೂಡಿಗೆರೆ: ದಿನಸಿ ಅಂಗಡಿಯ ಮರೆಯಲ್ಲಿ ಅಸ್ಸಾಂ ಕೂಲಿ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಬಣಕಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬಣಕಲ್ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಎಸ್‌ಎಸ್‌ಬಿ ಚಿಕನ್ ಅಂಗಡಿಯ ಮುಂಭಾಗದ ದಿನಸಿ ಅಂಗಡಿಯಲ್ಲಿ ನಯಾಜ್ ಅಹಮ್ಮದ್ (58) ಎಂಬಾತ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಅಂಗಡಿಯ ಹಿಂಭಾಗದ ಕೊಠಡಿಯಲ್ಲಿ ಪ್ಲಾಸ್ಟಿಕ್ ಬಕೆಟ್ ಒಳಗೆ ಕವರ್‌ಗಳಲ್ಲಿ ಪ್ಯಾಕ್ ಮಾಡಿಟ್ಟಿದ್ದ ಸುಮಾರು 11 ಕೆಜಿ ಗೋಮಾಂಸ ಪತ್ತೆಯಾಗಿದೆ.
ಸುತ್ತಮುತ್ತಲಿನ ಎಸ್ಟೇಟ್ ಗಳಲ್ಲಿ ಕೆಲಸ ಮಾಡುವ ಅಸ್ಸಾಂ ಕೂಲಿ ಕಾರ್ಮಿಕರಿಗೆ ಮಾರಾಟ ಮಾಡಲು ಚಿಕ್ಕಮಗಳೂರಿನ ಇಕ್ಬಾಲ್ ಎಂಬವರಿಂದ ಕೆಜಿಗೆ 250 ರೂ. ನಂತೆ ಖರೀದಿ ಮಾಡಿ ತಂದು, ಇಲ್ಲಿ ಕೆಜಿಗೆ 300 ರೂ. ನಂತೆ ಮಾರಾಟ ಮಾಡುತ್ತಿರುವುದಾಗಿ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಸ್ಥಳದಲ್ಲಿದ್ದ 11 ಕೆಜಿ ಗೋಮಾಂಸ, ಹಾಗೂ ಮಾಂಸ ಮಾರಾಟದಿಂದ ಬಂದಿದ್ದ 600 ರೂ. ನಗದನ್ನು ಪೊಲೀಸರು ಜಪ್ತಿ ಮಾಡಿದ್ದು ಜಪ್ತಿ ಮಾಡಿದ ಮಾಂಸದ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ನಯಾಜ್ ಅಹಮ್ಮದ್ ವಿರುದ್ಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
04/08/2026 10:29 pm
LOADING...