ಧಾರವಾಡ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರತ್ಯೇಕವಾಗಬೇಕು ಎಂದು ಒಂದು ಕಡೆ ಕೂಗು ಎದ್ದಿದ್ದರೆ, ಮತ್ತೊಂದು ಕಡೆ ಅದರ ವಿರುದ್ಧ ಕೂಗು ಕೇಳಿಬರುತ್ತಿದೆ. ಕಳೆದ ಆರು ತಿಂಗಳಿಂದ ಈ ಬಗ್ಗೆ ಹಗ್ಗಜಗ್ಗಾಟ ನಡೆಯುತ್ತಲೇ ಇದೆ. ಆದರೆ ಸರ್ಕಾರ ಮಾತ್ರ ಇನ್ನೂ ಈ ಬಗ್ಗೆ ಅಂತಿಮ ತೀರ್ಮಾನ ಮಾಡುತ್ತಿಲ್ಲ. ಸದ್ಯ ಎಲ್ಲಿಗೆ ಬಂದಿದೆ ಈ ಪ್ರತ್ಯೇಕ ಪಾಲಿಕೆಯ ಕಥೆ ಅನ್ನೋದರ ವಿವರ ಇಲ್ಲಿದೆ ನೋಡಿ.
ಹುಬ್ಬಳ್ಳಿ, ಧಾರವಾಡ ಮಹಾನಗರ ಪ್ರತ್ಯೇಕವಾಗಬೇಕು, ಇವು ಪ್ರತ್ಯೇಕವಾದರೆ ಎರಡೂ ನಗರಗಳು ಬೇಗ ಅಭಿವೃದ್ಧಿಯಾಗಲಿವೆ ಎಂಬುದು ಧಾರವಾಡ ಜನರ ಕೂಗು. ಇದಕ್ಕಾಗಿ ಧಾರವಾಡ ಜನರು ಮೊದಲಿನಿಂದಲೂ ಹೋರಾಟ ಮಾಡುತ್ತ ಬಂದಿದ್ದಾರೆ. ಸಿದ್ದರಾಮಯ್ಯ ಸಿಎಂ ಇದ್ದಾಗ ರಾಜ್ಯಪಾಲರಿಗೆ ಧಾರವಾಡ ಪ್ರತ್ಯೇಕ ಪಾಲಿಕೆಯಾಗಬೇಕು ಎಂದು ಅನುಮೋದನೆಗೆ ಕಳುಹಿಸಲಾಗಿತ್ತು. ರಾಜ್ಯಪಾಲರು ಅದಕ್ಕೆ ಅನುಮೋದನೆ ನೀಡಿ ವಾಪಸ್ ಸರ್ಕಾರಕ್ಕೆ ಕಳುಹಿಸಿದ್ದರಿಂದ, ವಿಷಯ ಮತ್ತೆ ಈಗ ರಾಜ್ಯ ಸರ್ಕಾರದ ಅಂಗಳಕ್ಕೆ ಬಂದಿದೆ.
ಆದರೆ, ಧಾರವಾಡದ ಕೆಲ ಸಂಘಟನೆಗಳು ಸರ್ಕಾರ ಪ್ರತ್ಯೇಕ ಪಾಲಿಕೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳಲಿ ಎಂದು ಒತ್ತಾಯ ಮಾಡುತ್ತಿರುವ ಬೆನ್ನಲ್ಲೇ, ಇನ್ನು ಕೆಲವು ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ. 'ಹುಬ್ಬಳ್ಳಿ-ಧಾರವಾಡ ಮೆಟ್ರೊಪಾಲಿಟನ್ ಸಿಟಿ' ಎಂಬ ಸಂಘಟನೆಯು ಪ್ರತ್ಯೇಕ ಪಾಲಿಕೆಯ ಅಧಿಸೂಚನೆಯನ್ನು (Notification) ವಾಪಸ್ ಪಡೆದು, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಜನರ ಅಭಿಪ್ರಾಯ ಪಡೆಯಲಿ ಎಂದು ಒತ್ತಾಯಿಸಿದೆ. ಮತ್ತೊಂದೆಡೆ, ಪ್ರತ್ಯೇಕ ಪಾಲಿಕೆಗಾಗಿ ಒತ್ತಡ ತಂದಿರುವ 'ಸತ್ಯ ಪ್ರತಿಪಾದನ ಹೋರಾಟ ಸಮಿತಿ'ಯು ಆಗಸ್ಟ್ 20ರ ಒಳಗೆ ಧಾರವಾಡ ಪ್ರತ್ಯೇಕ ಪಾಲಿಕೆಯಾಗಬೇಕು ಎಂದು ಆಗ್ರಹಿಸಿದೆ. ಸದ್ಯ ಎರಡೂ ಸಂಘಟನೆಗಳು ಪರ-ವಿರೋಧ ಹೋರಾಟ ನಡೆಸುತ್ತಿವೆ.
ಇದೆಲ್ಲದರ ಮಧ್ಯೆ, ಯಾವುದೇ ಒಂದು ನಿರ್ಣಯಕ್ಕೆ ಬರಬೇಕಾದರೆ ಪರ-ವಿರೋಧ ಇದ್ದೇ ಇರುತ್ತದೆ. ಸಿಎಂ ಬದಲಾವಣೆಯಾದ ಹಿನ್ನೆಲೆಯಲ್ಲಿ ಪ್ರತ್ಯೇಕ ಪಾಲಿಕೆ ವಿಷಯ ಸ್ವಲ್ಪ ತಡವಾಗಿದ್ದರೂ, ಮುಖ್ಯಮಂತ್ರಿಗಳು ಸಹ ಪ್ರತ್ಯೇಕ ಪಾಲಿಕೆ ಪರ ಮಾತನಾಡಿದ್ದಾರೆ. ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಒಟ್ಟಿನಲ್ಲಿ, ಪರ-ವಿರೋಧದ ನಡುವೆಯೂ ಪ್ರತ್ಯೇಕ ಪಾಲಿಕೆ ಮಾಡುವ ನಿಟ್ಟಿನಲ್ಲಿ ಸರ್ಕಾರಕ್ಕೂ ಒಲವಿದೆ. ಆದರೆ ತಡವಾದಷ್ಟು ಹೋರಾಟ ಮತ್ತೆ ಕಾವು ಪಡೆಯಲಿದೆ. ಹೀಗಾಗಿ ಸರ್ಕಾರ ಸೂಕ್ತ ತೀರ್ಮಾನವನ್ನು ಶೀಘ್ರ ಕೈಗೊಳ್ಳಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/08/2026 03:42 pm