ಹೊಸಪೇಟೆ: ಬ್ರಾಹ್ಮಣ ಸಮಾಜದ ಕೆಲ ಮುಖಂಡರು ಹಾಗೂ ಚಿಂತಾಮಣಿ ಮಠದ ಯತಿಗಳ ನಡುವೆ ಉಂಟಾಗಿರುವ ಬಿರುಕು ಪ್ರಕರಣಕ್ಕೆ ಸಂಬಂಧಿಸಿದಂತೆ, ಕೆಲ ಬ್ರಾಹ್ಮಣ ಸಮಾಜದ ಮುಖಂಡರ ನಡೆಗೆ ಬೇಸತ್ತು ಹೊಸಪೇಟೆಯ ಅಮರಾವತಿ ಬಡಾವಣೆಯಲ್ಲಿರುವ ಚಿಂತಾಮಣಿ ಮಠದ ಯತಿಗಳು ಒಬ್ಬರೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಜ್ಯದ ಪ್ರತಿಷ್ಠಿತ ಹೊಸಪೇಟೆ ಚಿಂತಾಮಣಿ ಮಠದ ಶಿವಾನಂದ ಭಾರತಿ ಸ್ವಾಮೀಜಿ ವಿರುದ್ಧ ಅಪಪ್ರಚಾರ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಅಪಪ್ರಚಾರದಿಂದ ನೊಂದು ಯತಿಗಳು ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದಾರೆ ಎನ್ನಲಾಗಿದೆ.
ಈ ವೇಳೆ ಮಾತನಾಡಿದ ಮಠದ ಯತಿ ಶಿವಾನಂದ ಭಾರತಿ ಸ್ವಾಮೀಜಿ, ಮಠದ ವಿರುದ್ಧ ಆರೋಪ ಮಾಡಿರುವ ಹೊಸಪೇಟೆಯ ಬ್ರಾಹ್ಮಣ ಸಮಾಜದ ಮುಖಂಡರಾದ ದಿವಾಕರ್ ಹಾಗೂ ಪವನ್ ಅವರು ಆರೋಪಗಳನ್ನು ಸಾಬೀತುಪಡಿಸಬೇಕು. ಇಲ್ಲವೇ ಕ್ಷಮೆಯಾಚಿಸಬೇಕು. ಇದು ನಮ್ಮ ಬೇಡಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇನೆ ಎಂದರು.
ಚಿಂತಾಮಣಿ ಮಠದ ಶಿವಾನಂದ ಭಾರತಿ ಸ್ವಾಮೀಜಿ ಪೂರ್ವಾಶ್ರಮದವರನ್ನು ಇಟ್ಟುಕೊಂಡಿದ್ದಾರೆ. ಸ್ವಾಮೀಜಿ ಸಾತ್ವಿಕ ಜೀವನ ನಡೆಸುತ್ತಿಲ್ಲ, ಲೌಕಿಕ ಜೀವನ ನಡೆಸುತ್ತಿದ್ದಾರೆ. ಟ್ರಸ್ಟಿಗಳಾಗಿ ಕುಟುಂಬಸ್ಥರನ್ನು ನೇಮಕ ಮಾಡಿಕೊಂಡಿದ್ದಾರೆ. ಹೊಸಪೇಟೆ ಬ್ರಾಹ್ಮಣ ಸಮುದಾಯವನ್ನು ಹೊರಗಿಟ್ಟು ವಿಜಯನಗರ ಜಿಲ್ಲಾ ಬ್ರಾಹ್ಮಣ ಸಂಘ ರಚನೆ ಮಾಡಿದ್ದಾರೆ. ಸನ್ಯಾಸತ್ವದ ಯಾವುದೇ ಲಕ್ಷಣಗಳಿಲ್ಲ ಎಂದು ಹೊಸಪೇಟೆ ಬ್ರಾಹ್ಮಣ ಸಮುದಾಯದ ದಿವಾಕರ್ ಹಾಗೂ ಪವನ್ ಆರೋಪಿಸಿದ್ದಾರೆ.
ಈ ಆರೋಪಗಳಲ್ಲಿ ಒಂದೇ ಒಂದು ಆರೋಪ ಸಾಬೀತಾದರೂ, ಅವರು ಹೇಳಿದಂತೆ ಕೇಳುತ್ತೇನೆ. ಆದರೆ ಆರೋಪಗಳಿಗೆ ದಾಖಲೆ ನೀಡಬೇಕು ಎಂದು ಶಿವಾನಂದ ಭಾರತಿ ಸ್ವಾಮೀಜಿ ಪಟ್ಟು ಹಿಡಿದಿದ್ದಾರೆ.
ವಿಜಯನಗರ ಜಿಲ್ಲೆಯಿಂದ ಯಾವುದೇ ಆಸ್ತಿಯನ್ನು ಕಬಳಿಸಲು ನಾನು ಸಂಚು ರೂಪಿಸಿಲ್ಲ. ನನ್ನ ವಿರುದ್ಧ ಮಾಡಿರುವ ಆರೋಪಗಳಿಗೆ ದಾಖಲೆಗಳನ್ನು ನೀಡಲಿ ಎಂದು ಚಿಂತಾಮಣಿ ಮಠದ ಶ್ರೀ ಶಿವಾನಂದ ಭಾರತಿ ಸ್ವಾಮೀಜಿ ಹೇಳಿದ್ದಾರೆ.
ಬ್ರಾಹ್ಮಣ ಸಮಾಜದ ಕೆಲ ಮುಖಂಡರೇ ಯತಿಗಳ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದು ನಿಜಕ್ಕೂ ಬೇಸರದ ಸಂಗತಿ ಎಂದು ಅವರು ಹೇಳಿದ್ದಾರೆ.
PublicNext
13/09/2026 11:37 am
LOADING...