ಹಾವೇರಿ : ಶಿಗ್ಗಾಂವಿ ತಾಲೂಕಿನ ಶಿಡ್ಲಾಪುರ ಗ್ರಾಮದಲ್ಲಿ ವರಮಹಾಲಕ್ಷ್ಮಿ ಪೂಜೆ ವೇಳೆ ದೇವಿಗೆ ಹಾಕಲಾಗಿದ್ದ ಸುಮಾರು 40 ಗ್ರಾಂ ಚಿನ್ನದ ಸರ ಕಳ್ಳತನವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣೆ ನೆಪದಲ್ಲಿ ಮಹಿಳೆಯರಿಗೆ ಬಂಕಾಪುರ ಪೊಲೀಸರು ಕರೆಂಟ್ ಶಾಕ್ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಆಗಸ್ಟ್ 20ರಂದು ನಾಗರಾಜ್ ಸುಂಕದ ಅವರ ಮನೆಯಲ್ಲಿ ನಡೆದ ವರಮಹಾಲಕ್ಷ್ಮಿ ಪೂಜೆಗೆ ಬಂದಿದ್ದ 11 ಮಹಿಳೆಯರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ನೀಲವ್ವ ಓಲೇಕಾರ್ ಸೇರಿದಂತೆ ಇಬ್ಬರು ಮಹಿಳೆಯರಿಗೆ ಕಿರುಕುಳ ನೀಡಿ, ಕೈ ಮತ್ತು ತಲೆಯ ಭಾಗಕ್ಕೆ ಕರೆಂಟ್ ಶಾಕ್ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಅಸ್ವಸ್ಥಗೊಂಡ ನೀಲವ್ವ ಅವರಿಗೆ ಬಂಕಾಪುರ ಹಾಗೂ ಹಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಈ ಕುರಿತು ನೀಲವ್ವ ಮಾತನಾಡಿ, ತಾವು ಯಾವುದೇ ಕಳ್ಳತನ ಮಾಡಿಲ್ಲ. ಆದರೂ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ಹೆಸರಿನಲ್ಲಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಮತ್ತೊಬ್ಬ ಮಹಿಳೆಗೂ ಕರೆಂಟ್ ಶಾಕ್ ನೀಡಿ ಹಲ್ಲೆ ಮಾಡಲಾಗಿದೆ ಎಂದು ದೂರಿದ್ದಾರೆ. ಘಟನೆ ಕುರಿತು ನ್ಯಾಯ ದೊರಕಿಸಿಕೊಡುವಂತೆ ಅವರು ಮನವಿ ಮಾಡಿದ್ದಾರೆ.
ಆದರೆ, ಈ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದಲೇ ಹೊರಬರಬೇಕಿದೆ. ಚಿನ್ನದ ಸರ ಕಳ್ಳತನ ಹಾಗೂ ಪೊಲೀಸರ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ತನಿಖೆ ಮುಂದುವರಿದಿದ್ದು, ಪೊಲೀಸರ ಅಧಿಕೃತ ವರದಿ ಬಳಿಕ ಪ್ರಕರಣದ ನಿಜಾಂಶ ಏನೆಂಬುದು ಸ್ಪಷ್ಟವಾಗಬೇಕಿದೆ.
PublicNext
14/09/2026 02:11 pm
LOADING...