ಹಾನಗಲ್: ಇತ್ತೀಚೆಗಷ್ಟೇ ಹಾನಗಲ್ಲಿನ ಈಶ್ವರ ನಗರದಲ್ಲಿ ಎರಡು ಮನೆಗಳಲ್ಲಿ ಕಳ್ಳತನ ನಡೆದ ಘಟನೆ ಮಾಸುವ ಮುನ್ನವೇ ಇದೀಗ ಹಾನಗಲ್ ಪಟ್ಟಣದ ಕೋಟಿಗೇರಿ ಓಣಿಯಲ್ಲಿ ಮೂರು ಮನೆಗಳಿಗೆ ಕನ್ನ ಹಾಕಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ.
ಹೌದು, ಪಟ್ಟಣದ ಕೋಟಿಗೇರಿ ಓಣಿಯಲ್ಲಿ ಒಂದೇ ದಿನ ಮೂರು ಮನೆಗಳಿಗೆ ನುಗ್ಗಿದ ಕಳ್ಳರು ₹9 ಲಕ್ಷಕ್ಕೂ ಅಧಿಕ ನಗದು ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಕೋಟಿಗೇರಿ ಓಣಿಯ ಪ್ರೇಮಾನಂದ ವೆಂಕಟೇಶ ಶೇಟ್, ಆನಂದ ನಾಗರಾಜ ಶೇಟ್ ಹಾಗೂ ಮಂಜುನಾಥ ಶೇಟ್ ಅವರ ಮನೆಗಳಲ್ಲಿ ಕಳ್ಳತನ ನಡೆದಿದ್ದು, ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕುಮಟಾ ತಾಲ್ಲೂಕಿನ ಕೆಕ್ಕಾರ ಗ್ರಾಮಕ್ಕೆ ತೆರಳಿದ್ದ ವೇಳೆ ಕಳ್ಳರು ಮನೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಇನ್ನೂ ಆಗಸ್ಟ್ ತಿಂಗಳಲ್ಲಿ ಈಶ್ವರ ನಗರದಲ್ಲಿ ಎರಡು ಮನೆ ಸೇರಿದಂತೆ ಕೋಟಿಗೇರಿ ಒಂದೇ ಓಣಿಯಲ್ಲಿ ಒಂದೇ ದಿನ ಮೂರು ಮನೆಗಳಲ್ಲಿ ಕಳ್ಳತನ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ವಿಷಯ ತಿಳಿಯುತ್ತಿದ್ದಂತೆ ಹಾನಗಲ್ ಠಾಣೆಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರು ಹಾಗೂ ಶ್ವಾನದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಕಳ್ಳರ ಸುಳಿವು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಮನೆಗಳಿಗೆ ಬೀಗ ಹಾಕಿ ಊರುಗಳಿಗೆ ತೆರಳುವವರ ಮನೆಗಳೇ ಕಳ್ಳರ ಟಾರ್ಗೆಟ್ ಆಗುತ್ತಿವೆ ಎಂಬ ಅನುಮಾನವೂ ಸಾರ್ವಜನಿಕರಲ್ಲಿ ಮೂಡಿದೆ.
ಈ ಕುರಿತು ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
PublicNext
18/09/2026 02:45 pm
LOADING...