ಹಾವೇರಿ : ಮಳೆಯ ಕೊರತೆಯಿಂದ ಕಷ್ಟಪಟ್ಟು ಬೆಳೆದಿದ್ದ ಬೆಳೆ ಒಣಗಿ ಹೋಗಿದ್ದಲ್ಲದೆ, ಮಾಡಿದ ಸಾಲ ತೀರಿಸಲಾಗದೆ ತೀವ್ರ ಮನನೊಂದ ಅನ್ನದಾತನೊಬ್ಬ ನೇಣಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಹಾವೇರಿ ತಾಲೂಕಿನ ದೇವಗಿರಿ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ತಿಮ್ಮಣ್ಣ ರಾಮಣ್ಣ ವಡ್ಡರ್ (50) ಎಂದು ಗುರುತಿಸಲಾಗಿದೆ.
ತಿಮ್ಮಣ್ಣ ಅವರಿಗೆ ಎರಡು ಎಕರೆ ಕೃಷಿ ಜಮೀನಿದ್ದು, ಈ ಬಾರಿ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ಆದರೆ ಮಳೆಯ ಕೊರತೆಯಿಂದಾಗಿ ಕಣ್ಣೆದುರೇ ಬೆಳೆ ಒಣಗಿ ನಾಶವಾಗಿತ್ತು. ಕೃಷಿ ಚಟುವಟಿಕೆ ಹಾಗೂ ಕುಟುಂಬ ನಿರ್ವಹಣೆಗಾಗಿ ಅವರು ಬ್ಯಾಂಕ್ ಹಾಗೂ ಕೈಸಾಲ ಸೇರಿ ಸುಮಾರು 12 ಲಕ್ಷ ರೂಪಾಯಿಗೂ ಹೆಚ್ಚು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಬೆಳೆ ಕೈಗೆ ಬಾರದ ಹಿನ್ನೆಲೆಯಲ್ಲಿ ಇತ್ತ ಸಾಲ ತೀರಿಸಲು ದಾರಿಯಿಲ್ಲದೆ, ಅತ್ತ ಲೇವಾದೇವಿದಾರರ ಒತ್ತಡ ತಾಳಲಾರದೆ ಕಳೆದ ಕೆಲ ದಿನಗಳಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಅಂತಿಮವಾಗಿ ಮನನೊಂದ ತಿಮ್ಮಣ್ಣ ತಮ್ಮ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಹಾವೇರಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Kshetra Samachara
17/09/2026 08:55 pm
LOADING...