ಹೊಸಪೇಟೆ : ಆತ್ಮಹತ್ಯೆ ಪ್ರಕರಣಗಳಲ್ಲಿ ಖಿನ್ನತೆ, ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆಗಳು ಮುಖ್ಯವಾಗಿರುತ್ತವೆ. ವ್ಯಕ್ತಿ ಸಹನೆ ಮತ್ತು ತಾಳ್ಮೆಯಿಂದ ಇದ್ದಲ್ಲಿ ಆತ್ಮಹತ್ಯೆಯನ್ನು ತಡೆಯಬಹುದು. ವ್ಯಕ್ತಿಯ ಮಾನಸಿಕ ಸ್ಥಿತಿ ಮುಖ್ಯವಾಗಿರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಲಿಂಗರಾಜು ಟಿ. ಅವರು ಹೇಳಿದರು. ವ್ಯಕ್ತಿಯ ಆತ್ಮಹತ್ಯೆಯನ್ನು ಖಿನ್ನತೆ ಹಾಗೂ ಮಾನಸಿಕ ಕಾಯಿಲೆ, ನಿರುದ್ಯೋಗ ಸೇರಿದಂತೆ ಹಲವಾರು ಅಂಶಗಳು ಪ್ರೇರೇಪಿಸುತ್ತವೆ. ಆದರೆ ಇವುಗಳನ್ನು ತಡೆಯುವಲ್ಲಿ ಸಕಾಲಿಕ ಸಮಾಲೋಚನೆ ಹಾಗೂ ಸೂಕ್ತ ಸಲಹೆ, ಮಾರ್ಗದರ್ಶನಗಳು ಮುಖ್ಯವಾಗಿರುತ್ತವೆ. ಕರ್ನಾಟಕ ಸರ್ಕಾರವು ಮಾನಸಿಕ ಸದೃಢತೆ ಹಾಗೂ ವ್ಯಕ್ತಿಯಲ್ಲಿ ಜೀವನದ ಆಸಕ್ತಿಯನ್ನು ಉಳಿಸಿ ಬೆಳೆಸಲು ಆರೋಗ್ಯ ಇಲಾಖೆಯ ಮೂಲಕ ಮಾನಸಿಕ ಆರೋಗ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ ಎಂದು ಹೇಳಿದರು.
ವಿಜಯನಗರ ಜಿಲ್ಲೆಯಲ್ಲಿ ಏಪ್ರಿಲ್-2025ರಿಂದ ಆಗಸ್ಟ್-2026ರವರೆಗೆ 15ರಿಂದ 60 ವರ್ಷದೊಳಗಿನ ವಿವಿಧ ವಯೋಮಾನದ 189 ಪುರುಷ ಹಾಗೂ 249 ಮಹಿಳೆಯರು ಸೇರಿದಂತೆ ಒಟ್ಟು ಅಂದಾಜು 438 ಜನ ವಿವಿಧ ವೈಯಕ್ತಿಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕ ಖಿನ್ನತೆ ಹಾಗೂ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ತಜ್ಞ ವೈದ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರಿಂದ ಆಪ್ತ ಸಮಾಲೋಚನೆ, ಅಗತ್ಯ ಔಷಧಿಗಳನ್ನು ನೀಡಲಾಗುತ್ತಿದೆ. ಶಾಲಾ-ಕಾಲೇಜು ಹಾಗೂ ಮಹಿಳಾ ಸಂಘದ ಸದಸ್ಯರಿಗೆ ತಿಳುವಳಿಕೆ ಕಾರ್ಯಕ್ರಮಗಳನ್ನು ಮತ್ತು ಪ್ರೇರಣಾದಾಯಕ ಉಪನ್ಯಾಸಗಳನ್ನು ಆಯೋಜಿಸಲಾಗುತ್ತಿದೆ ಎಂದು ಡಾ. ಲಿಂಗರಾಜು ಟಿ. ಅವರು ಹೇಳಿದರು.
ಅಧ್ಯಕ್ಷತೆ ವಹಿಸಿ ನಗರಸಭೆ ಪೌರಾಯುಕ್ತ ಎರಗುಡಿ ಶಿವಕುಮಾರ್ ಅವರು ಮಾತನಾಡಿ, ಆತ್ಮಹತ್ಯೆ ತಡೆಗಟ್ಟಲು ಸಮಾಜದಲ್ಲಿ ಜಾಗೃತಿ ಮೂಡಿಸುವುದು ಮತ್ತು ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಆತ್ಮಹತ್ಯೆ ದುಃಖದ ಸಂಗತಿಯಾಗಿದ್ದು, ಕುಟುಂಬದ ಮುಖ್ಯಸ್ಥ ಅಥವಾ ಯಾವುದೇ ವ್ಯಕ್ತಿ ಆತ್ಮಹತ್ಯೆಗೆ ಒಳಗಾದರೆ ಇಡೀ ಕುಟುಂಬದ ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ಕುಸಿದುಹೋಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಸಹ ಆತ್ಮಹತ್ಯೆಗೆ ಬಲಿಯಾಗುತ್ತಿದ್ದು, ತಂದೆ-ತಾಯಂದಿರು ತಮ್ಮ ದೈನಂದಿನ ಜೀವನದಲ್ಲಿ ಮಕ್ಕಳಿಗೂ ಪ್ರಾಮುಖ್ಯತೆ ನೀಡಬೇಕು ಅಂತ ಮನವಿ ಮಾಡಿದರು. ಇವು ವ್ಯಕ್ತಿಯನ್ನು ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಆತ್ಮಹತ್ಯೆಗೆ ದಾರಿ ಮಾಡುತ್ತವೆ. ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿ, ಅವರ ಭವಿಷ್ಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸಬೇಕು ಎಂದು ಹೇಳಿದರು.
ಹಿರಿಯ ನ್ಯಾಯವಾದಿಗಳಾದ ಕೆ. ಜಂಬಣ್ಣ ಅವರು ಮಾತನಾಡಿ, ವಿಶ್ವದಲ್ಲಿ ಪ್ರತಿ ವರ್ಷ ಸುಮಾರು 7,20,000 ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಭಾರತದಲ್ಲಿ ಪ್ರತಿ 40 ಸೆಕೆಂಡಿಗೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಅಂಕಿ-ಅಂಶಗಳನ್ನು ಗಮನಿಸಿದಾಗ, 35 ವರ್ಷದೊಳಗಿನ ಯುವಜನತೆ ಮತ್ತು ಪುರುಷರಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚಿರುವುದು ಕಂಡುಬಂದಿದೆ ಎಂದು ಹೇಳಿದರು. ಮದ್ಯಪಾನ, ಗಾಂಜಾ, ಅಫೀಮು ಮುಂತಾದ ದುಶ್ಚಟಗಳು ಮತ್ತು ಬಡತನ, ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿ ವಿವಾದಗಳು, ವಂಶವೃಕ್ಷ ಪಡೆಯಲು ಎದುರಾಗುವ ತೊಂದರೆಗಳು ಮತ್ತು ಸಾಲದ ಬಾಧೆ ಹೀಗೆ ವಿವಿಧ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ ಎಂದರು.
Kshetra Samachara
18/09/2026 02:37 pm