ಸಾಗರ : ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಸಕಾಲದಲ್ಲಿ ನಡೆಸದೆ ವಿಳಂಬ ಮಾಡುತ್ತಿರುವುದರಿಂದ ಪಂಚಾಯತ್ ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರ ಸರ್ಕಾರದಿಂದ ಬರಬೇಕಾದ ಕೋಟ್ಯಂತರ ರೂಪಾಯಿ ಅನುದಾನ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ತೀ ಶ್ರೀನಿವಾಸ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸಾಗರದ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ನಿಷ್ಕ್ರಿಯತೆಯಿಂದಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಭಾರಿ ಹಿನ್ನಡೆಯಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್‌ಗಳ ಅವಧಿ ಮುಗಿದು ಈಗಾಗಲೇ ಸುಮಾರು ಐದುವರೆ ವರ್ಷಗಳು ಕಳೆದಿವೆ. ಅದೇ ರೀತಿ ಗ್ರಾಮ ಪಂಚಾಯತ್‌ಗಳ ಅವಧಿ ಮುಗಿದು ಆರು ತಿಂಗಳು ಹಾಗೂ ಪಟ್ಟಣ ಪಂಚಾಯಿತಿ, ಪುರಸಭೆ ಮತ್ತು ನಗರಸಭೆಗಳ ಅಧಿಕಾರಾವಧಿ ಮುಕ್ತಾಯಗೊಂಡು ಒಂದೂವರೆ ವರ್ಷಗಳೇ ಸಂದಿವೆ. ಸಾಂವಿಧಾನಿಕ ನಿಯಮಗಳ ಅನ್ವಯ ಕಾಲಮಿತಿಯೊಳಗೆ ಚುನಾವಣೆ ನಡೆಸಬೇಕಾಗಿದ್ದರೂ ಸರ್ಕಾರ ಮೀನಮೇಷ ಎಣಿಸುತ್ತಿರುವುದು ಸ್ಥಳೀಯ ಸಂಸ್ಥೆಗಳ ಆಡಳಿತ ಕುಸಿತಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದರು.
ಸಂವಿಧಾನದ ನಿಯಮಾವಳಿಗಳ ಪ್ರಕಾರ ಪ್ರಜಾಸತ್ತಾತ್ಮಕವಾಗಿ ಚುನಾವಣೆಗಳನ್ನು ನಡೆಸದ ಪರಿಣಾಮವಾಗಿ, ಕೇಂದ್ರ ಸರ್ಕಾರವು ರಾಜ್ಯಕ್ಕೆ ಪತ್ರ ಬರೆದು 15ನೇ ಹಣಕಾಸು ಆಯೋಗದ ಶಿಫಾರಸಿನಡಿ ನೀಡಲಾಗುತ್ತಿದ್ದ ಅನುದಾನವನ್ನು ತಡೆಹಿಡಿದಿದೆ. ಚುನಾವಣೆಗಳು ನಡೆದು ಆಡಳಿತ ಮಂಡಳಿಗಳು ಅಸ್ತಿತ್ವಕ್ಕೆ ಬರುವವರೆಗೆ ಯಾವುದೇ ಹಣಕಾಸಿನ ನೆರವು ನೀಡುವುದಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಇದರಿಂದಾಗಿ ಸ್ಥಳೀಯ ಮಟ್ಟದಲ್ಲಿ ಮೂಲಭೂತ ಸೌಕರ್ಯಗಳ ನಿರ್ಮಾಣ ಹಾಗೂ ದೈನಂದಿನ ಕಾರ್ಯನಿರ್ವಹಣೆಗೆ ಸಂಪನ್ಮೂಲಗಳ ಕೊರತೆ ಎದುರಾಗಿದೆ.
ಈ ನಿರ್ಧಾರದಿಂದಾಗಿ ಜಿಲ್ಲೆಯೊಂದರಲ್ಲೇ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಲಭಿಸಬೇಕಿದ್ದ ಅಂದಾಜು ₹200 ಕೋಟಿಗೂ ಅಧಿಕ ಮೊತ್ತದ ಅನುದಾನವು ರದ್ದಾಗಿದ್ದು, ಕೈತಪ್ಪಿ ಹೋಗಿದೆ. ಇದೀಗ ಮುಂಬರುವ 16ನೇ ಹಣಕಾಸು ಆಯೋಗದ ಅನುದಾನವು ಹಿಂದಿನಕ್ಕಿಂತಲೂ ಅಧಿಕ ಮೊತ್ತದ್ದಾಗಿದ್ದು, ತಕ್ಷಣವೇ ಚುನಾವಣೆಗಳನ್ನು ನಡೆಸದಿದ್ದರೆ ಆ ಬೃಹತ್ ಮೊತ್ತವೂ ಕೂಡ ಜಿಲ್ಲೆಗೆ ದಕ್ಕದೆ ವಂಚಿತವಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದ ಅವರು, ಕೂಡಲೇ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಿಸಬೇಕೆಂದು ಆಗ್ರಹಿಸಿದರು.
ಜಮೀಲ್ ಸಾಗರ್, "ಪಬ್ಲಿಕ್ ನೆಕ್ಸ್ಟ್ ಸಾಗರ"
Kshetra Samachara
19/09/2026 11:13 am